ಕಾಸರಗೋಡು : ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ 'ಅಮ್ಮನ ಹೆಸರಿನಲ್ಲಿ ವೃಕ್ಷ'ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕ್ಯಾಂಪಸ್ ಡೆವಲಪ್ ಮೆಂಟ್ ಕಮಿಟಿ ನೇತೃತ್ವದಲ್ಲಿ ಕೇರಳ ಅರಣ್ಯ ಇಲಾಖೆಯು ಕಾಸರಗೋಡು ಸಾಮಾಜಿಕ ಅರಣ್ಯ ವಿಭಾಗದ ಸಹಯೋಗದಲ್ಲಿ 'ವಿದ್ಯಾವನ' ಎಂಬ ಹೆಸರಿನಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಪ್ರಭಾರ ಉಪಕುಲಪತಿ ಪೆÇ್ರ. ವಿನ್ಸೆಂಟ್ ಮ್ಯಾಥ್ಯೂ ಸಸಿ ನೆಡುವ ಮೂಲಕ ಯೋಜನೆ ಉದ್ಘಾಟಿಸಿ ಮಾತನಾಡಿ, ಕೆಂದ್ರೀಯ ವಿಶ್ವವಿದ್ಯಾನಿಲಯವು ಪ್ರಕೃತಿ ಸಂರಕ್ಷಣೆ ಮತ್ತು ಸಾಮಾಜಿಕ ಅರಣ್ಯೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಇದರಲ್ಲಿ 'ಅಮ್ಮನ ಹೆಸರಿನಲ್ಲಿ ವೃಕ್ಷ' ಒಂದಾಗಿದೆ ಎಂದು ತಿಳಿಸಿದರು.
ರಿಜಿಸ್ಟ್ರಾರ್ ಡಾ. ಎಂ. ಮುರಳೀಧರ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಆರ್. ಜಯಪ್ರಕಾಶ್, ಪುಲ್ಲೂರ್ ಪೆರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಕೆ. ಅರವಿಂದಾಕ್ಷನ್, ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಜ್ನಾ ಕರೀಂ, ಕ್ಯಾಂಪಸ್ ಅಭಿವೃದ್ಧಿ ಅಧಿಕಾರಿ ಡಾ. ಟೋನಿ ಗ್ರೇಸ್, ರೇಂಜ್ ಫಾರೆಸ್ಟ್ ಅಧಿಕಾರಿಗಳಾದ ಸೊಲೊಮನ್ ಟಿ. ಜಾರ್ಜ್, ಕೆ. ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.
ಕ್ಯಾಂಪಸ್‍ನಲ್ಲಿರುವ ಶಿಕ್ಷಕರ ವಸತಿ ಗೃಹದ ಬಳಿ ಎರಡು ಎಕರೆ ಜಾಗದಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ. ತಾಯಂದಿರ ಪರವಾಗಿ ಶಿಕ್ಷಕರು, ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ಸಸಿಗಳನ್ನು ನೆಟ್ಟು, ಇವುಗಳ ಪೋಷಣೆ ಜವಾಬ್ದಾರಿಯನ್ನೂ ವಹಿಸಿಕೊಳ್ಳುತ್ತಿದ್ದಾರೆ. ಔಷಧೀಯ ಸಸ್ಯಗಳು, ಹಣ್ಣಿನ ಮರಗಳು ಸೇರಿದಂತೆ 1200 ಸಸಿಗಳನ್ನು ನೆಡಲಾಗಿದೆ. ಕಳೆದ ವಿಶ್ವ ಪರಿಸರ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿಯನ್ನುದ್ದೇಶಿಸಿ ಮಾತನಾಡುವ ಸಂದರ್ಭ ಪರಿಸರದ ಬಗ್ಗೆ ಪ್ರೀತಿ-ಗೌರವ ತೋರಲು ಅಮ್ಮನ ಹೆಸರಿನಲ್ಲಿ ವೃಕ್ಷ ಅಭಿಯಾನ ಆರಂಭಿಸುವ ಬಗ್ಗೆ ನೀಡಿದ ಸಂದೇಶದ ಹಿನ್ನೆಲೆಯಲ್ಲಿ ಕ್ಯಾಂಪಸ್‍ನಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ.