ಸ್ವಾತಂತ್ರ್ಯ ದಿನಾಚರಣೆಯಂದು ದೇಶದಾದ್ಯಂತ ತ್ರಿವರ್ಣ ಧ್ವಜ ಹಾರಾಡಿದೆ. ದೇಶದ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯೋತ್ಸವ ಆಚರಿಸಲಾಗಿದೆ. ಅದ್ರಲ್ಲೂ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಖುಷಿ ಮತ್ತೆಲ್ಲು ಸಿಗದು.
ಕೇಸರಿ ಬಿಳಿ ಹಸಿರು ಬಟ್ಟೆ ಧರಿಸಿ ಬರುವ ಮಕ್ಕಳು ಧ್ವಜ ಸ್ತಂಭದ ಸುತ್ತಲು ನಿಂತು ರಾಷ್ಟ್ರ ಧ್ವಜಕ್ಕೆ ಗೌರವ ಅರ್ಪಿಸಿ ರಾಷ್ಟ್ರಗೀತೆ ಹಾಡುತ್ತಾರೆ. ಹಾಗೆ ರಾಷ್ಟ್ರ ಧ್ವಜಾರೋಹಣ ಈ ದಿನದ ವಿಶೇಷಗಳಲ್ಲಿ ಒಂದಾಗಿರುತ್ತದೆ. ಆದ್ರೆ ಈ ವಿಶೇಷ ಸಂದರ್ಭದಲ್ಲಿ ನೆಡೆದಿರುವ ವಿಚಿತ್ರ ಘಟನೆಯ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ.
ಕೇರಳದ ಶಾಲೆಯೊಂದರಲ್ಲಿ ಧ್ವಜಾರೋಹಣ ವೇಳೆ ಪಕ್ಷಿಯೊಂದು ಮಡಚಿದ್ದ ಬಾವುಟ ತೆರೆಯಲು ಸಹಾಯ ಮಾಡಿದೆ ಎಂದು ವಿಡಿಯೋವೊಂದು ಹರಿಬಿಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆಗಸ್ಟ್ 17 ರಂದು ಪೋಸ್ಟ್ ಮಾಡಲಾದ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆ ಗಳಿಸಿದೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಜನರ ಗುಂಪು ಧ್ವಜಾರೋಹಣವನ್ನು ನೆರವೇರಿಸುತ್ತಿರುವುದನ್ನು ನಾವು ನೋಡಬಹುದು. ಧ್ವಜವು ಕಂಬದ ತುದಿಯನ್ನು ತಲುಪಿದಾಗ ಅದು ಬಿಚ್ಚುಕೊಳ್ಳುವುದರಲ್ಲಿ ತೊಡಕು ಕಂಡುಬಂದತಿದೆ. ಆದರೆ ಈ ವೇಳೆ ಎಲ್ಲಿಂದಲೋ ಬಂದ ಪಕ್ಷಿಯೊಂದು ಧ್ವಜವನ್ನು ಬಿಡಿಸುವಲ್ಲಿ ಸಹಾಯ ಮಾಡಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ಆ ಪಕ್ಷಿ ಹಾರಿ ಬಂದು ಧ್ವಜದ ಮೇಲೆ ಕುರಿತು ಬಿಡಿಸುತ್ತಿರುವಂತೆ ಕಾಣುತ್ತಿದೆ, ಈ ವಿಡಿಯೋ ನೋಡಿದ ಮಂದಿ ಅಚ್ಚರಿಗೆ ಒಳಗಾಗಿದ್ದಾರೆ. ಆ ಪಕ್ಷಿ ಹೇಗೆ ಧ್ವಜವನ್ನು ತೆರೆಯಲು ಕಲಿಯಿತು ಎಂದು ಅಚ್ಚರಿ ಪಡುತ್ತಿದ್ದಾರೆ. ಧ್ವಜ ತೆರೆದುಕೊಂಡ ಬಳಿಕ ಪಕ್ಷಿ ಹಾರಿ ಹೋಗುವುದು ಸಹ ನಾವು ನೋಡಬಹುದು.
ಆದರೆ ಈ ವಿಡಿಯೋವನ್ನು ನಾವು ಸರಿಯಾಗಿ ಗಮನಿಸಿದಾಗ ಬಾವುಟಕ್ಕೂ ಅಲ್ಲಿ ಹಾರಿ ಬಂದ ಪಕ್ಷಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಯುತ್ತೆ. ಇದು ಎಡಿಟ್ ಮಾಡಲಾದ ವಿಡಿಯೋ ಅಂತೂ ಅಲ್ಲ. ಅಲ್ಲಿ ಪಕ್ಷಿ ಹಾರಿ ಬರುವುದು ಸಹ ನಿಜವೇ ಆದರೆ ಆ ಪಕ್ಷಿಗೂ ಬಾವುಟಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ.
ಹೇಗೆ ಎಂಬುದನ್ನು ನಾವು ವಿವರಿಸುತ್ತೇವೆ ನೋಡಿ. ಇಲ್ಲಿ ಪಕ್ಷಿ ಹಾರಿ ಬರುವ ವೇಳೆಗೆ ಸರಿಯಾಗಿ ಬಾವುಟ ಕಂಬದ ಮೇಲೆ ಏರಿದೆ. ಆದರೆ ಪಕ್ಷಿ ಈ ಬಾವುಟದ ಹತ್ತಿರವೂ ಬಂದಿಲ್ಲ. ಆ ಪಕ್ಷಿ ಧ್ವಜದ ಹಿಂದೆ ಕಾಣುತ್ತಿರುವ ತೆಂಗಿನ ಮರದಲ್ಲಿ ಅದು ಕುಳಿತುಕೊಳ್ಳುತ್ತಿದೆ. ಆದರೆ ನಮಗೆ ಅದು ಬಾವುಟದ ಮೇಲೆ ಕುಳಿತು ಅದನ್ನು ಬಿಡಿಸಿದಂತೆ ಕಾಣುತ್ತಿದೆ. ಅಲ್ಲದೆ ಧ್ವಜ ತೆರೆದಾಗ ಅದು ತೆಂಗಿನ ಮರದಿಂದ ಹಾರಿ ಹೋಗುತ್ತಿದೆ. ಆದರೆ ನಮಗೆ ಧ್ವಜದ ಕಂಬದಿಂದ ಅದು ಹಾರಿ ಹೋದಂತೆ ವಿಡಿಯೋದಲ್ಲಿ ಕಾಣಿಸುತ್ತಿದೆ.
ಈ ವಿಡಿಯೋ ಮಾಡಿದವರು ತೆಂಗಿನಮರ ಹಾಗೂ ಧ್ವಜಕ್ಕೆ ನೇರವಾಗಿ ನಿಂತಿದ್ದರ ಪರಿಣಾಮವಾಗಿ ನಮಗೆ ಈ ರೀತಿ ಕಾಣಿಸುತ್ತಿದೆ. ಆದರೆ ಪಕ್ಷಿಗೂ ಬಾವುಟ ತರೆದುಕೊಂಡಿರುವುದಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ. ಆದರೆ ವಿಡಿಯೋ ನೋಡಿದವರು ಇದು ಸತ್ಯ ಎಂದು ನಂಬಿಕೊಂಡಿದ್ದಾರೆ. ಆದರೆ ಇನ್ನೊಂದು ವಿಡಿಯೋವನ್ನು ನಾವು ನೋಡಿದರೆ ಅದರಲ್ಲಿ ಸ್ಪಷ್ಟವಾಗಿ ಅಲ್ಲಿ ನಡೆದಿರುವುದು ಏನು ಎಂಬುದು ತಿಳಿದುಬರುತ್ತದೆ.
ಈ ಎರಡನೇ ವಿಡಿಯೋ ನೋಡಿದ ಮಂದಿ ಈ ಘಟನೆಯ ಕುರಿತು ತಿಳಿದುಕೊಂಡಿದ್ದಾರೆ, ಅಲ್ಲಿ ಅಸಲಿಗೆ ನಡೆದಿರುವುದು ಇಷ್ಟೇ ವಿಚಾರ ಎಂದು ತಿಳಿದು ನಕ್ಕು ಸುಮ್ಮನಾಗಿದ್ದಾರೆ.