ಕಾಸರಗೋಡು: ವಯನಾಡಿನಂತಹ ಮಹಾದುರಂತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು, ನಾಡಿನ ಜನತೆಯ ಸಂರಕ್ಷಣೆಗೆ ಮುಂದಾಗಬೇಕು ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಸದಾಶಿವ ಭಟ್ ಹರಿನಿಲಯ ತಿಳಿಸಿದ್ದಾರೆ.
ಅವರು ಎಣ್ಮಕಜೆ ಪಂಚಾಯಿತಿಯ ಇತಿಹಾಸ ಪ್ರಸಿದ್ಧ ಇಟ್ಟಿಪಳ್ಳ ಹಾಗೂ ಆಸುಪಾಸಿನಲ್ಲಿ ನಡೆಯುತ್ತಿರುವ ಅನಧಿಕೃತ ಕೆಂಪುಕಲ್ಲು ಕ್ವಾರೆಗಳ ವಿರುದ್ಧ ಸ್ಥಳೀಯ ನಾಗರಿಕರು ಎಣ್ಮಕಜೆ ಗ್ರಾಮಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಸಾಂಕೇತಿಕ ಮುಷ್ಕರ ಉದ್ಘಾಟಿಸಿ ಮಾತನಾಡಿದರು. ಪುರಾತನ ಜಲಸಂಗ್ರಹಾಗಾರವಾಗಿರುವ ಇಟ್ಟಿಪಳ್ಳಕ್ಕೆ ಶತಮಾನದ ಇತಿಹಾಸವಿದ್ದು, ಇದನ್ನೂ ಬಿಡದೆ ಕೆಂಪುಕಲ್ಲು ದಂಧೆ ನಡೆಸಲಾಗುತ್ತಿದೆ. ಸನಿಹದಲ್ಲೇ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಆರಾಧನಾಲಯ, ಮಂದಿರ, ಕೆಳಭಾಗದಲ್ಲಿ ನೂರಾರು ಮನೆಗಳಿದ್ದು ಇವೆಲ್ಲವೂ ಕೆಂಪುಕಲ್ಲು ಕಾರೆಗಳಿಂದ ಭೀತಿ ಎದುರಿಸುವಂತಾಗಿದೆ. ಪ್ರಕೃತಿಯ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ನಾಡಿನಲ್ಲಿ ಸಾವುನೋವಿನ ಮಹಾದುರಂತ ಕಣ್ಣಮುಂದಿದ್ದರೂ, ಇದರಿಂದ ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ಏಕಾಏಕಿ ಕೆಂಪುಕಲ್ಲುಕ್ವಾರಿಗಳಿಗೆ ಅನುಮತಿ ನೀಡುವ ಮೂಲಕ ಜನಸಾಮಾನ್ಯರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವುದು ಖಂಡನೀಯ ಎಂದು ತಿಳಿಸಿದರು.
ಗೋಪಾಲಕೃಷ್ಣ ಭಟ್, ಪುರುಷೋತ್ತಮ ನಾಯಕ್ ಮೊದಲಾದವರು ನೇತೃತ್ವ ನೀಡಿದರು. ಅನಧಿಕೃತ ಕಲ್ಲಿನ ಕ್ವಾರಿ ನಿಯಂತ್ರಿಸದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲೂ ಸಿದ್ಧ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಸಮಾಜಸೇವಕಿ ಲಲಿತಾಕೇಶವ ನಾಯ್ಕ್ ಖಂಡಿಗೆ ಸ್ವಾಗತಿಸಿದರು. ಶ್ರೀನಿಧಿ ಭಟ್ ವಂದಿಸಿದರು.