ಚೆನ್ನೈ: ಶಿವಗಂಗಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಟಿ.ದೇವನಾಥನ್ ಯಾದವ್ ಅವರನ್ನು ಠೇವಣಿದಾರರಿಗೆ ವಂಚಿಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಚೆನ್ನೈ: ಶಿವಗಂಗಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಟಿ.ದೇವನಾಥನ್ ಯಾದವ್ ಅವರನ್ನು ಠೇವಣಿದಾರರಿಗೆ ವಂಚಿಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ತಮಿಳುನಾಡಿನ ಆರ್ಥಿಕ ವಿಭಾಗದ ಪೊಲೀಸರ ತಂಡವು ಆರೋಪಿಯನ್ನು ತಿರುಚಿರಾಪಳ್ಳಿಯಲ್ಲಿ ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಚೆನ್ನೈಗೆ ಕರೆತಂದಿತು.
ದೇವನಾಥನ್ ಮುಖ್ಯಸ್ಥರಾಗಿರುವ 'ಮೈಲಾಪೋರ್ ಹಿಂದೂ ಶಾಶ್ವತ್ ನಿಧಿ ಲಿಮಿಟೆಡ್' ಸಂಸ್ಥೆಯು ಹೆಚ್ಚಿನ ಬಡ್ಡಿ ನೀಡುವುದಾಗಿ ಜನರಿಂದ ಹಣ ಪಡೆದು ನಂತರ ವಂಚಿಸಿತ್ತು. ಇದರಿಂದ ಮೋಸಹೋದ ನೂರಾರು ಮಂದಿ ಪ್ರತಿಭಟನೆ ನಡೆಸಿ, ದೂರು ದಾಖಲಿಸಿದ್ದರು.
ದೇವನಾಥನ್ ಅವರು 'ಇಂಧಿಯಾ ಮಕ್ಕಳ್ ಕಳ್ವಿ ಮುನ್ನೆತ್ರ ಕಳಗಂ' ರಾಜಕೀಯ ಪಕ್ಷ ಸ್ಥಾಪಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರು. ಶಿವಗಂಗಾ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ, ಸೋಲುಂಡಿದ್ದರು.
ಬಂಧನದ ಕುರಿತು ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ,'ಮೈಲಾಪೊರ್ ಹಿಂದೂ ಶಾಶ್ವತ್ ನಿಧಿ ಲಿಮಿಟೆಡ್'ನಲ್ಲಿ ಹೂಡಿಕೆದಾರರಿಗೆ ನ್ಯಾಯ ಒದಗಿಸಲು ಪಕ್ಷ ಬದ್ಧವಾಗಿದೆ. ಸರ್ಕಾರವು ವಿಸ್ತೃತ ತನಿಖೆ ನಡೆಸಿ, ಹೂಡಿಕೆದಾರರಿಗೂ ಇದನ್ನು ಖಚಿತಪಡಿಸಬೇಕು' ಎಂದು 'ಎಕ್ಸ್' ಮೂಲಕ ತಿಳಿಸಿದ್ದಾರೆ.