ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೊಸ ಅವಕಾಶಗಳ ಕಾರ್ಯಸಾಧ್ಯತೆ ಅಧ್ಯಯನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಹೇಳಿದರು.
ಅವರು ‘ನಮ್ಮ ಕಾಸರಗೋಡು’ ಜಿಲ್ಲಾಧಿಕಾರಿಗಳ ಮುಖಾಮುಖಿ ಕಾರ್ಯಕ್ರಮದ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಇದಕ್ಕಾಗಿ ಕಂದಾಯ ಇಲಾಖೆ, ಎನ್‍ಎಚ್‍ಎಐ, ನಿರ್ಮಾಣ ಕಂಪನಿಗಳು, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗುವುದು. ಈ ಕುರಿತು ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲಾಗುವುದು.
ಜಿಲ್ಲಾಧಿಕಾರಿ ಕೆ. ಇನ್ಭಾಶೇಖರ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೈಗಾರಿಕಾ ಕ್ಷೇತ್ರದ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. ಉತ್ತರ ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಪ್ರತಿನಿಧಿಗಳು ನೀಡಿದ ಸಲಹೆಗಳನ್ನು ಚರ್ಚಿಸಲಾಯಿತು
ಜಿಲ್ಲೆಯಲ್ಲಿ ಎಲೆಕ್ಟ್ರಿಕ್ ವಾಹನ ಘಟಕ ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ವಿದ್ಯಾನಗರದಿಂದ ಕೋರ್ಟ್ ಕಾಂಪ್ಲೆಕ್ಸ್ ವರೆಗಿನ ರಸ್ತೆಯುದ್ದಕ್ಕೂ ‘ಫುಡ್ ಸ್ಟ್ರೀಟ್’ ಯೋಜನೆ ಸ್ಥಾಪಿಸಲು ಕಾಸರಗೋಡು ನಗರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು. ಮಂಜೇಶ್ವರ ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಹೆಚ್ಚಿನ ಕೈಗಾರಿಕಾ ಪಾರ್ಕ್‍ಗಳನ್ನು ಸ್ಥಾಪಿಸುವ ಸಾಧ್ಯತೆಯನ್ನು ಸಭೆಯಲ್ಲಿ ನಿರ್ಣಯಿಸಲಾಯಿತು.
ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ. ಸಜಿತ್ ಕುಮಾರ್, ಉಪ ಪ್ರಧಾನ ವ್ಯವಸ್ಥಾಪಕಿ ಆರ್.ರೇಖಾ, ಉತ್ತರ ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಕಾಸರಗೋಡು ಚಾಪ್ಟರ್ ಅಧ್ಯಕ್ಷ ಎ.ಕೆ.ಶ್ಯಾಮ್ ಪ್ರಸಾದ್, ಪ್ರಧಾನ ಸಂಚಾಲಕ ಎಂ.ಎನ್.ಪ್ರಸಾದ್, ಕೋಶಾಧಿಕಾರಿ ಜಲೀಲ್ ಮುಹಮ್ಮದ್, ಅಬ್ದುಲ್ಖಾದರ್, ಮನ್ಸೂರ್ ಮತ್ತಿತರರು ಉಪಸ್ಥಿತರಿದ್ದರು. ಸಾರ್ವಜನಿಕರು ವಿವಿಧ ವಿಷಯಗಳ ಕುರಿತು ಸಲಹೆಗಳನ್ನು nammudekasaragod@gmail.com ಇಮೇಲ್ ವಿಳಾಸಕ್ಕೆ ಕಳುಹಿಸಬಹುದು.