ನವದೆಹಲಿ: ಆಗಸ್ಟ್ 11 ರಂದು ನಿಗದಿಯಾಗಿರುವ ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ನೀಟ್-ಪಿಜಿ ಪರೀಕ್ಷೆ ಮುಂದೂಡುವಂತೆ ಕೋರಿ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ಐದು ವಿದ್ಯಾರ್ಥಿಗಳಿಗಾಗಿ ಎರಡು ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
"ಇಂತಹ ಪರೀಕ್ಷೆಯನ್ನು ನಾವು ಹೇಗೆ ಮುಂದೂಡಬಹುದು. ಸಂಜಯ್ ಹೆಗ್ಡೆ ಅವರೇ ಇತ್ತೀಚಿನ ದಿನಗಳಲ್ಲಿ ಜನ ಸುಖಾಸುಮ್ಮನೇ ಪರೀಕ್ಷೆ ಮುಂದೂಡುವಂತೆ ಕೋರಿ ಕೋರ್ಟ್ ಗೆ ಬರುತ್ತಾರೆ. ಇದು ಪರಿಪೂರ್ಣ ಜಗತ್ತಲ್ಲ. ನಾವು ಶೈಕ್ಷಣಿಕ ತಜ್ಞರಲ್ಲ. ತಾತ್ವಿಕವಾಗಿ, ನಾವು ಪರೀಕ್ಷೆಯನ್ನು ಮುಂದೂಡುವುದಿಲ್ಲ. ನಾವು ಪರೀಕ್ಷೆ ಮುಂದೂಡಿದರೆ ವಾರಾಂತ್ಯದಲ್ಲಿ ಎರಡು ಲಕ್ಷ ವಿದ್ಯಾರ್ಥಿಗಳು ಮತ್ತು ನಾಲ್ಕು ಲಕ್ಷ ಪೋಷಕರು ಕಣ್ಣೀರು ಹಾಕುತ್ತಾರೆ. ಈ ಅರ್ಜಿಗಳ ಹಿಂದೆ ಯಾರಿದ್ದಾರೆ ಎಂದು ನಮಗೆ ಗೊತ್ತಿಲ್ಲ’’ ಎಂದು ಪೀಠ ಹೇಳಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ಸ್ನಾತಕೋತ್ತರ ಪದವಿ) (ನೀಟ್-ಪಿಜಿ)ಯನ್ನು ಮರು ನಿಗದಿಪಡಿಸುವ ಅಗತ್ಯವಿದೆ. ಏಕೆಂದರೆ ಬೆಳಗ್ಗೆ ಒಂದು ಮತ್ತು ಮಧ್ಯಾಹ್ನ ಒಂದು ಪರೀಕ್ಷೆ ಇದೆ.
ಅನೇಕ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ತಲುಪಲು ಅನಾನುಕೂಲವಾಗಿರುವ ನಗರಗಳನ್ನು ಹಂಚಲಾಗಿದೆ ಎಂದು ವಾದಿಸಿದರು.
ಈ ಮೊದಲು ಜೂನ್ 23 ರಂದು ಪರೀಕ್ಷೆ ನಿಗದಿಯಾಗಿತ್ತು. ಆದರೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು "ಮುನ್ನೆಚ್ಚರಿಕೆ ಕ್ರಮ" ವಾಗಿ ನೀಟ್ ಪಿಜಿ ಪರೀಕ್ಷೆಯನ್ನು ಆಗಸ್ಟ್ 11ಕ್ಕೆ ಮುಂದೂಡಿತ್ತು.