ವಾಷಿಂಗ್ಟನ್: ಭಾರತ ಮೂಲದ ಅಮೆರಿಕ ಉಪಾಧ್ಯಕ್ಷೆ, ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರ ವಿರುದ್ಧ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಕ್ಷ್ಮಹೀನ ಜನಾಂಗೀಯ ದಾಳಿ ನಡೆಸಿದ್ದಾರೆ.
ಕಮಲಾ ಹ್ಯಾರಿಸ್ ಕಪ್ಪುವರ್ಣೀಯ ಮಹಿಳೆಯೇ? ಅಥವಾ ಭಾರತೀಯರೇ? ಎಂದು ಟ್ರಂಪ್ ಪ್ರಶ್ನಿಸಿದ್ದಾರೆ.
ಟ್ರಂಪ್ ಅವರ ಈ ಉದ್ಧಟತನದ ಹೇಳಿಕೆಗೆ ಡೆಮಾಕ್ರಟಿಕ್ ಪಕ್ಷವು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಇದು ಮತದಾರರನ್ನು ಇಬ್ಭಾಗಿಸುವ, ಅಭ್ಯರ್ಥಿಗೆ ಅಗೌರವ ತೋರುವ ಟ್ರಂಪ್ ಅವರ ಹಳೆಯ ತಂತ್ರವಾಗಿದೆ ಎಂದು ಹೇಳಿದೆ.
ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಆಗುವವರೆಗೂ ಭಾರತ-ಅಮೆರಿಕ ಮೂಲವನ್ನು ಒತ್ತಿ ಹೇಳುತ್ತಿದ್ದ ಕಮಲಾ, ಈಗ ಇದ್ದಕ್ಕಿದ್ದಂತೆ ಕಪ್ಪುವರ್ಣೀಯರೆಂದು ಹೇಳುತ್ತಿದ್ದಾರೆ ಎಂದು ಟ್ರಂಪ್ ತಪ್ಪು ಸಂದೇಶ ಸಾರುತ್ತಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷ ಆರೋಪಿಸಿದೆ.
'ಪರೋಕ್ಷವಾಗಿ ಅವರ(ಕಮಲಾ ಹ್ಯಾರಿಸ್) ಬಗ್ಗೆ ಬಲ್ಲೆ. ಅವರು ಯಾವಾಗಲೂ ತಮ್ಮನ್ನು ಭಾರತೀಯ ಮೂಲದವರೆಂದೇ ಗುರುತಿಸಿಕೊಳ್ಳುತ್ತಿದ್ದರು. ಆಕೆ ಕಪ್ಪುವರ್ಣೀಯ ಮಹಿಳೆ ಎಂದು ಹಲವು ವರ್ಷಗಳಿಂದ ನನಗೆ ಗೊತ್ತಿರಲಿಲ್ಲ. ಈಗ ಅವರು ಕಪ್ಪುವರ್ಣೀಯಳೆಂದು ಗುರುತಿಸಿಕೊಳ್ಳಲು ಬಯಸುತ್ತಿದ್ದಾರೆ. ಹಾಗಾಗಿ, ಅವರು ಭಾರತೀಯರೋ? ಕಪ್ಪುವರ್ಣೀಯರೋ? ನನಗೆ ಗೊತ್ತಿಲ್ಲ ' ಎಂದು ಷಿಕಾಗೊದಲ್ಲಿ ಕಪ್ಪುವರ್ಣೀಯ ಪತ್ರಿಕೋದ್ಯಮಿಗಳ ರಾಷ್ಟ್ರೀಯ ಸಂಘದ ಸಮ್ಮೇಳನದಲ್ಲಿ ಟ್ರಂಪ್ ಹೇಳಿದ್ಧಾರೆ.
ನವೆಂಬರ್ 5ರಂದು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರ ಬಿರುಸುಗೊಂಡಿದ್ದು, ಬೈಡನ್ ಬದಲಿಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರ ಪರ ಒಲವು ಹೆಚ್ಚಿರುವುದು ಜನಾಭಿಪ್ರಾಯ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಕಮಲಾ ಹ್ಯಾರಿಸ್ ತಾಯಿ ಭಾರತ ಮೂಲದವರಾಗಿದ್ದು, ತಂದೆ ಜಮೈಕಾದವರಾಗಿದ್ದಾರೆ.
ವಾಷಿಂಗ್ಟನ್‌ನಲ್ಲಿ ಕಪ್ಪುವರ್ಣೀಯರಿಗಾಗಿಯೇ ಇರುವ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಮಲಾ ಹ್ಯಾರಿಸ್ ವಿದ್ಯಾಭ್ಯಾಸ ಮಾಡಿದ್ದಾರೆ.
ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಲಾ ಸ್ಕೂಲ್‌ನಲ್ಲಿ ಓದುತ್ತಿದ್ದಾಗ ಕಮಲಾ, ಕಪ್ಪುವರ್ಣೀಯ ಕಾನೂನು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿದ್ದರು.
ಈ ಬಗ್ಗೆ ಟ್ರಂಪ್ ಗಮನ ಸೆಳೆಯಲು ಯತ್ನಿಸಿದ ಪತ್ರಕರ್ತನೊಬ್ಬ, ಕಮಲಾ ಹ್ಯಾರಿಸ್ ಯಾವಾಗಲೂ ತಾವು ಕಪ್ಪುವರ್ಣೀಯರೆಂದೇ ಗುರುತಿಸಿಕೊಂಡಿದ್ದಾರೆ. ಐತಿಹಾಸಿಕವಾಗಿ ಕಪ್ಪುವರ್ಣೀಯರಿಗೆಂದೇ ಇರುವ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಹಾಗಿದ್ದರೆ ನಾನು ಅದನ್ನು ಗೌರವಿಸುತ್ತೇನೆ. ಆದರೆ, ಈ ಹಿಂದೆಲ್ಲ ಅವರು ಭಾರತದ ಮೂಲವನ್ನೇ ಒತ್ತಿ ಹೇಳುತ್ತಿದ್ದರು. ಈಗ ಇದ್ದಕ್ಕಿದ್ದಂತೆ ಕಪ್ಪು ವರ್ಣೀಯರೆಂದು ಹೇಳುತ್ತಿದ್ದಾರೆ. ಈ ಬಗ್ಗೆ ನಿಮ್ಮಲ್ಲಿ ಯಾರಾದರೂ ಪರಿಶೀಲನೆ ಮಾಡಿ ಎಂದು ಟ್ರಂಪ್ ಹೇಳಿದ್ದಾರೆ.