ನವದೆಹಲಿ: 6ನೇ ತರಗತಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕದಲ್ಲಿ ಭಾರತದ ಸಂವಿಧಾನದ ಪೀಠಿಕೆ ಕುರಿತ ವಿಷಯವು ಸಮರ್ಪಕವಾಗಿಯೇ ಇದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ಪ್ರತಿಕ್ರಿಯಿಸಿದ್ದಾರೆ.
ನವದೆಹಲಿ: 6ನೇ ತರಗತಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕದಲ್ಲಿ ಭಾರತದ ಸಂವಿಧಾನದ ಪೀಠಿಕೆ ಕುರಿತ ವಿಷಯವು ಸಮರ್ಪಕವಾಗಿಯೇ ಇದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಕೆಲವು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಿಂದ ಸಂವಿಧಾನದ ಪೀಠಿಕೆಯನ್ನು ಕೈಬಿಡುವ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ, 'ಇದು ದೇಶದ ಮೇಲೆ ಕೋಮು ಸಿದ್ಧಾಂತವನ್ನು ಹೇರುವ ಪ್ರಯತ್ನವಾಗಿದೆ' ಎಂದು ಹೇಳಿತ್ತು.
ಸಂಸತ್ತಿನ ಶೂನ್ಯ ವೇಳೆಯಲ್ಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು, 'ಭಾರತೀಯ ಸಂವಿಧಾನದ ಆತ್ಮ ಮತ್ತು ಅಡಿಪಾಯವಾದ ಪೀಠಿಕೆಯನ್ನು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಪ್ರಕಟಿಸಲಾಗುತ್ತಿತ್ತು. ಪ್ರತಿಯೊಬ್ಬ ನಾಗರಿಕರು ವಿಶೇಷವಾಗಿ ಭವಿಷ್ಯದ ಪೀಳಿಗೆಗೆ ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ತತ್ವಗಳು ಮತ್ತು ಮೌಲ್ಯಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಬಿ. ಆರ್. ಅಂಬೇಡ್ಕರ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ತ್ಯಾಗದ ಬಗ್ಗೆ ಶಿಕ್ಷಣ ನೀಡಬೇಕು' ಎಂದು ಹೇಳಿದ್ದರು.
ಶೂನ್ಯ ವೇಳೆಯ ನಂತರ, 'ಎನ್‌ಸಿಇಆರ್‌ಟಿ ಪುಸ್ತಕಗಳ ಬಗ್ಗೆ ಖರ್ಗೆ ಕೆಲವು ಟೀಕೆಗಳನ್ನು ಮಾಡಿದ್ದಾರೆ. ಸಂವಿಧಾನದ ಪೀಠಿಕೆಯು ಸರಿಯಾದ ರೀತಿಯಲ್ಲಿಯೇ ಪಠ್ಯದಲ್ಲಿ ಇದೆ' ಎಂದು ಸದನಕ್ಕೆ ಪ್ರಧಾನ್ ಮಾಹಿತಿ ನೀಡಿದರು.