ಕಾಸರಗೋಡು: ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿನ ವಿಪತ್ತು ಪೀಡಿತ ಪ್ರದೇಶಗಳ ಕುರಿತು ವಿಶೇಷ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮಲೆನಾಡು ಪ್ರದೇಶದ ವಿವಿಧೆಡೆ ಭೂಕುಸಿತಕ್ಕೆ ಸಾಧ್ಯತೆಯಿಒರುವುದಾಗಿ ಸಭೆಯಲ್ಲಿ ಅಭಿಪ್ರಾಯಪಡಲಾಯಿತು.
ಭೂಕುಸಿತದ ಅಪಾಯ ಎದುರಿಸುತ್ತಿರುವ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳನ್ನು ಸ್ಥಳಾಂತರಿಸಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆಶ್ರಯ ಮನೆನಿರ್ಮಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ತಿಳಿಸಿದರು. ಭೂಕುಸಿತದ ಭೀತಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಚೆರ್ಕಳದಿಂದ ಚಟ್ಟಂಚಾಲ್ ಮಾರ್ಗದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಿರುವುದು ಪರಿಣಾಮಕಾರಿಯಾಗಿದೆ ಎಂದು ಪ್ರಾಧಿಕಾರದ ಸಭೆ ನಿರ್ಣಯಿಸಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರದೇಶಗಳಲ್ಲಿ ಭೂಕುಸಿತದ ಭೀತಿಯನ್ನು ಅಧ್ಯಯನ ಮಾಡಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಜ್ಞರ ಸೇವೆಯನ್ನು ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ವಯನಾಡ್ ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹೆಚ್ಚಿನ ಸಂಖ್ಯೆಯಲ್ಲಿ ದೇಣಿಗೆ ಲಭಿಸುತ್ತಿದೆ. ಮಳೆಗಾಲದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಉಂಟಾಗುತ್ತಿರುವ ತೊಡಕು ನಿವಾರಿಸಿ ಸೂಕ್ತರೀತಿಯಲ್ಲಿ ವಿದ್ಯುತ್ ಪೂರೈಕೆಗೆ ಸಹಕರಿಸುತ್ತಿರುವ ಕೆಎಸ್‌ಇಬಿ ಸಿಬ್ಬಂದಿಯ ಸೇವೆ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಹೇಳಿದರು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರು, ರಾಜ್ಯ ಸ್ಪೆಶ್ಯಲ್ ಬ್ರಾಂಚ್ ಡಿವೈಎಸ್ಪಿ ಎಂ.ಸುನಿಲ್ ಕುಮಾರ್ ಮೊದಲದವರು ಉಪಸ್ಥಿತರಿದ್ದರು.