HEALTH TIPS

ವಕ್ಫ್‌ ಮಸೂದೆ ತಿದ್ದುಪಡಿಗೆ ಪ್ರತಿಪಕ್ಷಗಳ ವಿರೋಧ

       ವದೆಹಲಿ: ವಕ್ಫ್‌ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಸಂಸತ್ತಿನ ಜಂಟಿ ಸಮಿತಿಯು ತನ್ನ ಮೊದಲ ಸಭೆಯನ್ನು ಗುರುವಾರ ನಡೆಸಿತು. ಸುಮಾರು ಆರು ಗಂಟೆಗಳವರೆಗೆ ನಡೆದ ಸಭೆಯಲ್ಲಿ ವಿರೋಧ ಪಕ್ಷಗಳ ಪ್ರತಿನಿಧಿಗಳು ತಿದ್ದುಪಡಿ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದರು.

          ಸಭೆಯಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಮಸೂದೆಯಲ್ಲಿನ ಮಹತ್ವದ ಅಂಶಗಳನ್ನು ಸಭೆಗೆ ವಿವರಿಸಿತು.

           ಸಭೆಯಲ್ಲಿದ್ದ ಬಿಜೆಪಿ ಸದಸ್ಯರು ಮಸೂದೆಯಲ್ಲಿನ ಪ್ರಸ್ತಾವಿತ ತಿದ್ದುಪಡಿಗಳು ಮಹಿಳಾ ಸಬಲೀಕರಣದ ಉದ್ದೇಶವನ್ನು ಒಳಗೊಂಡಿವೆ ಎಂದು ಶ್ಲಾಘಿಸಿದರು. ಮಸೂದೆಯಲ್ಲಿನ ನಿಬಂಧನೆಗಳ ಬಗ್ಗೆ ಕೆಲವರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿ, ಸಲಹೆಗಳನ್ನು ನೀಡಿದರು. ಕೆಲ ವಿಷಯಗಳಿಗೆ ಸಂಬಂಧಿಸಿದಂತೆ  ಸ್ಪಷ್ಟೀಕರಣಗಳನ್ನೂ ಪಡೆದರು.

           ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಮಿತಿಯ ಅಧ್ಯಕ್ಷೆ ಜಗದಾಂಬಿಕಾ ಪಾಲ್‌, 'ಆರು ಗಂಟೆಗಳ ಕಾಲ ನಡೆದ ಸಭೆಯು ಫಲಪ್ರದವಾಗಿದೆ' ಎಂದರು. ಇತ್ತೀಚಿನ ದಿನಗಳಲ್ಲಿ ಸಂಸದೀಯ ಸಮಿತಿ ನಡೆಸಿದ ಸುದೀರ್ಘ ಸಭೆಗಳಲ್ಲಿ ಇದೂ ಒಂದಾಗಿದೆ ಎಂದು ಸದಸ್ಯರೊಬ್ಬರು ಪ್ರತಿಕ್ರಿಯಿಸಿದರು. ಸಮಿತಿಯ ಮುಂದಿನ ಸಭೆ ಇದೇ 30ರಂದು ನಡೆಯಲಿದ್ದು, ವಿವಿಧ ರಾಜ್ಯಗಳ ವಕ್ಫ್‌ ಸಂಸ್ಥೆಗಳ ಅಭಿಪ್ರಾಯಗಳನ್ನು ಕೇಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

             ಪ್ರತಿ ಪಕ್ಷಗಳ ವಿರೋಧ: 'ಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಸಮರ್ಪಕ ಉತ್ತರ ನೀಡಲಿಲ್ಲ. ಸಚಿವಾಲಯದವರು ಸರಿಯಾಗಿ ಸಿದ್ಧವಾದಂತೆ ತೋರಲಿಲ್ಲ' ಎಂದು ವಿವಿಧ ಪಕ್ಷಗಳ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

         ಸಭೆಯಲ್ಲಿ ಬಿಜೆಪಿಯ ಸಂಜಯ್‌ ಜೈಸ್ವಾಲ್‌, ಅಪರಾಜಿತಾ ಸಾರಂಗಿ, ತೇಜಸ್ವಿ ಸೂರ್ಯ, ದಿಲೀಪ್‌ ಸೈಕಿಯಾ ಮತ್ತು ಗುಲಾಂ ಅಲಿ; ಕಾಂಗ್ರೆಸ್‌ ಪಕ್ಷದ ಗೌರವ್‌ ಗೊಗೊಯ್‌ ಮತ್ತು ನಾಸೀರ್‌ ಹುಸೇನ್‌; ಟಿಎಂಸಿಯ ಕಲ್ಯಾಣ್‌ ಬ್ಯಾನರ್ಜಿ, ವೈಎಸ್‌ಆರ್‌ ಕಾಂಗ್ರೆಸ್‌ನ ವಿ. ವಿಜಯಸಾಯಿ ರೆಡ್ಡಿ, ಎಎಪಿಯ ಸಂಜಯ್‌ ಸಿಂಗ್‌, ಎಐಎಂಐಎಂನ ಅಸಾದುದ್ದೀನ್‌ ಒವೈಸಿ, ಡಿಎಂಕೆಯ ಎ. ರಾಜಾ, ಎಲ್‌ಜೆಪಿಯ ಅರುಣ್‌ ಭಾರ್ತಿ, ಟಿಡಿಪಿಯ ಲಾವು ಶ್ರೀಕೃಷ್ಣ ದೇವರಾಯಲು ಭಾಗವಹಿಸಿದ್ದರು.

             ಬಿಜೆಪಿ ಮಿತ್ರ ಪಕ್ಷಗಳಾದ ಲೋಕ ಜನಶಕ್ತಿ ಪಕ್ಷ (ರಾಮ್‌ ವಿಲಾಸ್‌) ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ಮುಸ್ಲಿಂ ಸಮುದಾಯದ ಕಳವಳಗಳ ಕುರಿತು ವ್ಯಾಪಕ ಸಮಾಲೋಚನೆ ನಡೆಯಬೇಕು ಎಂದು ಕರೆ ನೀಡಿವೆ.

          ವಿವಾದಿತ ಆಸ್ತಿಯ ಮಾಲೀಕತ್ವವನ್ನು ನಿರ್ಧರಿಸುವಲ್ಲಿ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡುವ ಮತ್ತು ವಕ್ಫ್‌ ಮಂಡಳಿಗಳಲ್ಲಿ ಮುಸ್ಲಿಮೇತರ ಸದಸ್ಯರಿಗೆ ಅವಕಾಶ ನೀಡುವುದೂ ಸೇರಿದಂತೆ ಮಸೂದೆಯ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಸದಸ್ಯರು ಪ್ರಶ್ನಿಸಿದರು.

'ಸಾಮಾಜಿಕ ಅಸ್ಥಿರತೆ'

             ಉದ್ದೇಶಿತ ಕಾನೂನು ಅನುಷ್ಠಾನವಾದರೆ ಅದರಿಂದ ಸಾಮಾಜಿಕ ಅಸ್ಥಿರತೆ ಉಂಟಾಗುತ್ತದೆ ಎಂದು ಎಐಎಂಐಎಂನ ಅಸಾದುದ್ದೀನ್‌ ಒವೈಸಿ ಹೇಳಿದರು ಎಂದು ಮೂಲಗಳು ತಿಳಿಸಿವೆ. ಸಾಂವಿಧಾನಿಕ ಮೌಲ್ಯಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸದಂತೆ ಸಮಿತಿ ಎಚ್ಚರವಹಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಕಾಂಗ್ರೆಸ್‌ನ ಗೌರವ್‌ ಗೊಗೊಯ್‌ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

             ಮಸೂದೆಗೆ ಸಂಬಂಧಿಸಿದಂತೆ ವ್ಯಕ್ತವಾಗಿರುವ ಕಳವಳಗಳ ಬಗ್ಗೆ ಚರ್ಚಿಸಲಾಗುವುದು ಮತ್ತು ಸಂಬಂಧಿಸಿದ ವಿವಿಧ ಮಧ್ಯಸ್ಥಗಾರರ ಅಭಿಪ್ರಾಯ ಕೇಳಲಾಗುವುದು. 44 ತಿದ್ದುಪಡಿಗಳ ಬಗ್ಗೆ ಚರ್ಚಿಸಿ ಮುಂದಿನ ಅಧಿವೇಶನದ ವೇಳೆಗೆ ಉತ್ತಮ ಮತ್ತು ಸಮಗ್ರ ಮಸೂದೆ ಸಿದ್ಧವಾಗುವಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಭೆಯ ಆರಂಭದಲ್ಲಿ ಸಮಿತಿಯ ಅಧ್ಯಕ್ಷರಾದ ಜಗದಾಂಬಿಕಾ ಪಾಲ್‌ ಹೇಳಿದರು.

ನಾಯ್ಡು, ನಿತೀಶ್‌ ಬೆಂಬಲ: ಸೈಫುಲ್ಲಾ

           ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ತಮ್ಮ ಪಕ್ಷಗಳು ವಕ್ಫ್‌ (ತಿದ್ದುಪಡಿ) ಮಸೂದೆಯನ್ನು ವಿರೋಧಿಸುತ್ತವೆ ಎಂದು ಭರವಸೆ ನೀಡಿದ್ದಾರೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಖಾಲಿದ್‌ ಸೈಫುಲ್ಲಾ ರಹಮಾನಿ ಗುರುವಾರ ತಿಳಿಸಿದರು.

              ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಜಮಿಯತ್‌ ಉಲೇಮಾ-ಎ-ಹಿಂದಿ ಮತ್ತು ಇತರ ಮುಸ್ಲಿಂ ಸಂಘಟನೆಗಳು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಮಸೂದೆಯನ್ನು ಹಿಂಪಡೆಯದಿದ್ದರೆ ದೇಶದಾದ್ಯಂತ ಚಳವಳಿ ಆರಂಭಿಸುವುದಾಗಿ ಅವರು ಹೇಳಿದರು. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಶಿವಸೇನಾದ ಉದ್ಧವ್‌ ಠಾಕ್ರೆ ಮತ್ತು ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್‌ ಅವರೂ ಮಸೂದೆ ವಿರೋಧಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries