ನವದೆಹಲಿ: 'ಕೃಷಿಕರ 'ಎಲ್ಲ ಕಾಲದ' ಬೇಡಿಕೆಗಳನ್ನು ಸೌಹಾರ್ದವಾಗಿ ಚರ್ಚಿಸಿ, ಪರಿಹಾರ ಕಲ್ಪಿಸಲು ಬಹುಸದಸ್ಯರ ಸಮಿತಿ ರಚಿಸಲಾಗುವುದು' ಎಂದು ಸುಪ್ರೀಂ ಕೋರ್ಟ್ ಗುರುವಾರ ಪ್ರಕಟಿಸಿದೆ.
ರೈತರಿಗೆ ಸಂಬಂಧಿಸಿದ ವಿಷಯಗಳ ತಾತ್ಕಾಲಿಕ ಪಟ್ಟಿಯನ್ನು ಉಲ್ಲೇಖಿತ ಸಮಿತಿಗೆ ಒಪ್ಪಿಸಬೇಕು ಎಂದು ಪಂಜಾಬ್, ಹರಿಯಾಣ ಸರ್ಕಾರಗಳಿಗೆ ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಸೆ.2ಕ್ಕೆ ಮುಂದೂಡಿತು.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಂಕರ್ ದತ್ತಾ, ಉಜ್ಜಲ್ ಭುಯಾನ್ ಅವರಿದ್ದ ಪೀಠವು, ಪ್ರತಿಭಟನನಿರತ ರೈತರ ಜೊತೆಗೆ ಸಂಪರ್ಕದಲ್ಲಿರಬೇಕು ಹಾಗೂ ಹೆದ್ದಾರಿಗೆ ಅಡ್ಡಲಾಗಿ ಇರಿಸಿರುವ ಟ್ರ್ಯಾಕ್ಟರ್, ಟ್ರಾಲಿಗಳನ್ನು ತೆರವುಗೊಳಿಸಲು ಮನವೊಲಿಸಬೇಕು ಎಂದು ಉಭಯ ಸರ್ಕಾರಗಳಿಗೆ ನಿರ್ದೇಶಿಸಿತು.
'ಸುಪ್ರೀಂ ಕೋರ್ಟ್ ಆ. 12ರಂದು ನೀಡಿದ್ದ ಆದೇಶದನುಸಾರ ಪ್ರತಿಭಟನನಿರತ ರೈತರ ಜೊತೆಗೆ ಚರ್ಚಿಸಿದ್ದು, ಹೆದ್ದಾರಿ ತಡೆಯನ್ನು ಭಾಗಶಃ ಕೈಬಿಡಲು ಒಪ್ಪಿದ್ದಾರೆ' ಎಂದು ಪಂಜಾಬ್ ಸರ್ಕಾರವು ಪೀಠಕ್ಕೆ ತಿಳಿಸಿತು.
ಶಂಭು ಗಡಿಯಲ್ಲಿ ಫೆಬ್ರುವರಿ 13ರಿಂದ ಧರಣಿ ನಡೆಸುತ್ತಿರುವ ರೈತರ ಮನವೊಲಿಸಿ, ರಸ್ತೆಯಲ್ಲಿ ಇರಿಸಿರುವ ಟ್ರಾಕ್ಯ್ಟರ್, ಟ್ರಾಲಿ ತೆರವಿಗೆ ಕ್ರಮವಹಿಸಬೇಕು ಎಂದು ಹಿಂದೆ ಪಂಜಾಬ್ ಸರ್ಕಾರಕ್ಕೆ ಆದೇಶಿಸಲಾಗಿತ್ತು.
ಶಂಭು ಗಡಿಯಲ್ಲಿ ಹಾಕಿರುವ ತಡೆಗೋಡೆಯನ್ನು ವಾರದಲ್ಲಿ ತೆರವುಗೊಳಿಸಬೇಕು ಎಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಹರಿಯಾಣ ಸರ್ಕಾರ ಸುಪ್ರೀಂ ಕೋರ್ಟ್ ಮೇಟ್ಟಿಲೇರಿತ್ತು.
ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ರೈತ ಸಂಘಟನೆಗಳು ರೈತರ ಧರಣಿ ಬೆಂಬಲಿಸಿ ದೆಹಲಿ ಚಲೋ ಅಭಿಯಾನಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರ ಅಂಬಾಲಾ -ನವದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಹತ್ತಿಕ್ಕಲು ತಡೆಗೋಡೆಯನ್ನು ರಚಿಸಿತ್ತು.