ನವದೆಹಲಿ: ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾಂಗ್ಲಾದೇಶವನ್ನು ತೊರೆದು ಭಾರತದಲ್ಲಿ ಆಶ್ರಯ ಪಡೆಯುತ್ತಿರುವ ಪದಚ್ಯುತ ಶೇಖ್ ಹಸೀನಾ ಅವರು ಮೊದಲ ಬಾರಿಗೆ ತಮ್ಮ ದೇಶದ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ್ದು, ಬಾಂಗ್ಲಾದಲ್ಲಿನ ಈ ಪರಿಸ್ಥಿತಿಗೆ ಹಾಗೂ ಸರ್ಕಾರ ಪತನಕ್ಕೆ ಅಮೆರಿಕ ಕಾರಣ ಎಂದು ಆರೋಪಿಸಿದರು
ಬಾಂಗ್ಲಾದಲ್ಲಿ ಈ ಪರಿಸ್ಥಿತಿ ಸೃಷ್ಟಿಸಲು ಅಮೆರಿಕಾಕ್ಕೆ ಬಲವಾದ ಕಾರಣವಿದೆ. ನಾನು ಸೇಂಟ್ ಮಾರ್ಟಿನ್ ದ್ವೀಪದ ಸಾರ್ವಭೌಮತ್ವವನ್ನು ಒಪ್ಪಿಸಿದ್ದರೆ ಮತ್ತು ಬಂಗಾಳ ಕೊಲ್ಲಿಯ ಮೇಲೆ ಹಿಡಿತ ಸಾಧಿಸಲು ಅಮೆರಿಕಾಕ್ಕೆ ಅವಕಾಶ ನೀಡಿದ್ದರೆ, ಅಧಿಕಾರದಲ್ಲಿ ಉಳಿಯಬಹುದಿತ್ತು ಎಂದು ಶೇಖ್ ಹಸೀನಾ ಹೇಳಿದ್ದಾರೆ. ದೇಶದ ಜನರಲ್ಲಿ ನಾನು ಮನವಿ ಮಾಡುತ್ತೇನೆ ಮೂಲಭೂತವಾದಿಗಳ ಮಾತಿನಿಂದ ದಾರಿತಪ್ಪಬೇಡಿ.. ದಯವಿಟ್ಟು ಶಾಂತವಾಗಿರಿ ಎಂದು ಹೇಳಿದರು.
ಬಾಂಗ್ಲಾದಲ್ಲಿ ಹಿಂಸಾಚಾರವನ್ನು ತಪ್ಪಿಸಲು ನಾನು ರಾಜೀನಾಮೆ ನೀಡಿದ್ದೇನೆ. ನಾನು ದೇಶದಲ್ಲೇ ಉಳಿದುಕೊಂಡಿದ್ದರೆ ಹೆಚ್ಚಿನ ಸಾವು ಮತ್ತು ವಿನಾಶ ಆಗುತಿತ್ತು. ಅವರು ವಿದ್ಯಾರ್ಥಿಗಳ ಮೃತ ದೇಹಗಳ ಮೇಲೆ ಅಧಿಕಾರವನ್ನು ಪಡೆಯುವ ಗುರಿಯನ್ನು ಹೊಂದಿದ್ದರು. ಆದರೆ ನಾನು ರಾಜೀನಾಮೆ ನೀಡುವ ಮೂಲಕ ಅದನ್ನು ತಡೆದಿದ್ದೇನೆ. ನೀವು ನನ್ನನ್ನು ಚುನಾವಣೆಯಲ್ಲಿ ಆರಿಸಿದ್ದರಿಂದ ನಿಮಗೆ ನಾಯಕಿಯಾದೆ. ನೀವು ನನ್ನ ಶಕ್ತಿಯಾಗಿದ್ದೀರಿ ಎಂದು ಹಸೀನಾ ಹೇಳಿದರು.
ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ರಜಾಕರ್ಸ್ ಎಂದು ನಾನು ಕರೆದಿಲ್ಲ. ನಿಮ್ಮನ್ನು ಪ್ರಚೋದಿಸಲು ನನ್ನ ಮಾತುಗಳನ್ನು ತಿರುಚಲಾಗಿದೆ ರಾಷ್ಟ್ರವನ್ನು ಅಸ್ಥಿರಗೊಳಿಸಲು ನಿಮ್ಮ ಮುಗ್ದತೆಯನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಆ ದಿನದ ಸಂಪೂರ್ಣ ವಿಡಿಯೋವನ್ನು ವೀಕ್ಷಿಸಿ ಎಂದು ವಿದ್ಯಾರ್ಥಿ ಪ್ರತಿಭಟನಾಕಾರರಿಗೆ ಸ್ಪಷ್ಟನೆ ನೀಡಿದರು. 1971ರ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನಿ ಮಿಲಿಟರಿಯ ಸಹಯೋಗಿಗಳೆಂದು ನಂಬಲಾದ ಜನರನ್ನು ಉಲ್ಲೇಖಿಸಲು ರಜಾಕರ್ಸ್ ಎಂಬ ಪದವನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಬಾಂಗ್ಲಾದೇಶದ ಸರ್ಕಾರಿ ಉದ್ಯೋಗದಲ್ಲಿನ ಮೀಸಲಾತಿ ವ್ಯವಸ್ಥೆಯನ್ನು ಕೊನೆಗೊಳಿಸುವಂತೆ ಒತ್ತಾಯಿಸಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಾಗ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ಆಗಸ್ಟ್ 5 ರಂದು ರಾಜೀನಾಮೆ ನೀಡಿದರು. ಪ್ರತಿಭಟನಾಕಾರರು ಅವರ ನಿವಾಸವನ್ನು ಮುತ್ತಿಗೆ ಹಾಕಿದಾಗ ಮಿಲಿಟರಿ ವಿಮಾನದಲ್ಲಿ ಢಾಕಾದಿಂದ ಪಲಾಯನ ಮಾಡಿದರು. ಪ್ರಸ್ತುತ ಭಾರತದಲ್ಲಿ ಆಶ್ರಯ ಪಡೆದಿರುವ ಅವರು ಸುರಕ್ಷಿತ ಸ್ಥಳದಲ್ಲಿದ್ದಾರೆ.