ವಯನಾಡ್: 'ನನ್ನ ವೃತ್ತಿಜೀವನದಲ್ಲಿ ಅನೇಕ ಮೃತದೇಹಗಳನ್ನು ನೋಡಿದ್ದೇನೆ, ಆದರೆ ಇಂತಹ ಜರ್ಜರಿತ ದೇಹಗಳನ್ನು ನೋಡಿಯೇ ಇರಲಿಲ್ಲ. ಭೂಕುಸಿತದ ತೀವ್ರತೆ ಎಷ್ಟಿತ್ತೆಂದರೆ, ಅದು ಹಲವರ ದೇಹಗಳನ್ನು ಪುಡಿಪುಡಿ ಮಾಡಿದೆ'...
ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಲೇ ಇದೆ.
'ಶವಪರೀಕ್ಷೆ ಮಾಡುವ ವೃತ್ತಿಗೆ ನಾನು ಒಗ್ಗಿಕೊಂಡಿದ್ದೇನೆ. ಆದರೆ ಇಲ್ಲಿ ನೋಡುತ್ತಿರುವ ನಜ್ಜುಗುಜ್ಜಾದ ದೇಹಗಳನ್ನು ಹಿಂದೆಂದೂ ನೋಡಿಲ್ಲ. ಒಮ್ಮೆ ನೋಡಿದ ದೇಹವನ್ನು ಮತ್ತೊಮ್ಮೆ ನೋಡಲು ಸಾಧ್ಯವಾಗುತ್ತಿರಲಿಲ್ಲ' ಎಂದು ಹೇಳುವಾಗ ಅವರ ಧ್ವನಿ ಕ್ಷೀಣಿಸಿತು.
'ಮರಣೋತ್ತರ ಪರೀಕ್ಷೆ ನಡೆಸಲು ದೊರೆತ ಮೊದಲ ದೇಹವನ್ನು ನೋಡಿದಾಗಲೇ ಮಾನಸಿಕವಾಗಿ ಕುಗ್ಗಿಹೋದೆ. ಇದನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ನನ್ನಲ್ಲೇ ಹೇಳಿಕೊಂಡೆ. ನನಗೆ ದೊರೆತ ಎರಡನೆಯ ಮೃತದೇಹ ಒಂದು ವರ್ಷದ ಮಗುವಿನದ್ದಾಗಿತ್ತು. ಅದನ್ನು ನೋಡಿದಾಗ ಈ ಕೆಲಸ (ಮರಣೋತ್ತರ ಪರೀಕ್ಷೆ) ನನ್ನಿಂದ ಮುಂದುವರಿಸಲು ಸಾಧ್ಯವಿಲ್ಲ ಎಂಬುದು ಖಚಿತವಾಯಿತು. ಆಸ್ಪತ್ರೆಯ ಈ ವಾರ್ಡ್ ಬಿಟ್ಟು ಗಾಯಾಳುಗಳಿಗೆ ಚಿಕಿತ್ಸೆ ನೀಡುವ ವಿಭಾಗಕ್ಕೆ ಓಡಿ ಹೋಗಲು ಬಯಸಿದ್ದೆ. ಆದರೆ ನನ್ನ ಮುಂದೆ ಬೇರೆ ಆಯ್ಕೆ ಇರಲಿಲ್ಲ' ಎಂದು ಅನುಭವ ಬಿಚ್ಚಿಟ್ಟರು.
'ಮರಣೋತ್ತರ ಪರೀಕ್ಷೆ ನಡೆಸಲು ಎಂಟು ಟೇಬಲ್‌ಗಳು ಇದ್ದವು. ಆರಂಭದಲ್ಲಿ ನಾನು ಒಬ್ಬಳೇ ಇದ್ದೆ. ಬೇರೆ ಕಡೆಗಳಿಂದ ವೈದ್ಯರು ಬಂದ ಕಾರಣ ಸಂಜೆಯ ವೇಳೆಗೆ ಪ್ರತಿ ಟೇಬಲ್‌ಗೂ ಒಬ್ಬರು ವೈದ್ಯರು ಲಭ್ಯವಾದರು. ರಾತ್ರಿ 7.30ರ ವೇಳೆಗೆ 53 ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದೆವು. ದುರಂತ ನಡೆದ ಮೊದಲ ದಿನದಂದು (ಜುಲೈ 30) ವೈದ್ಯರ ತಂಡ ರಾತ್ರಿ 11.30ರ ವರೆಗೂ ಕೆಲಸ ಮಾಡಿ, 93 ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿತು' ಎಂದು ಮಾಹಿತಿ ನೀಡಿದರು.
ವೈದ್ಯಕೀಯ ಸಿಬ್ಬಂದಿ ಹೋರಾಟ
ದುರಂತದಲ್ಲಿ ಗಂಭೀರವಾಗಿ ಗಾಯಗೊಂಡವರ ಪ್ರಾಣ ಉಳಿಸಲು ಮತ್ತು ಸಾವಿಗೀಡಾದವರ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯಕೀಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.
'ಗುರುವಾರ ಬೆಳಿಗ್ಗೆ 7ರವರೆಗೆ 256 ಶವಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದೇವೆ. ಇದರಲ್ಲಿ ದೇಹದ ಅಂಗಾಂಗಗಳೂ ಸೇರಿವೆ. ಅಂದರೆ 256 ಪೂರ್ಣ ದೇಹಗಳಲ್ಲ. ದೇಹದ ಭಾಗಗಳೂ ಒಳಗೊಂಡಿವೆ. ನಾವು 154 ದೇಹಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದೇವೆ' ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದರು.
ಚಾಲಿಯಾರ್ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಮಲಪ್ಪುರ ಜಿಲ್ಲೆಯ ಪೋತ್ತುಕಲ್‌ನಲ್ಲಿ ಪತ್ತೆಯಾಗಿರುವ ಮೃತದೇಹಗಳ ಮರಣೋತ್ತರ ಪರೀಕ್ಷೆಯೂ ನಡೆದಿದೆ ಎಂದರು.