ನವದೆಹಲಿ: ಆಯುರ್ವೇದ, ಸಿದ್ಧ ಮತ್ತು ಯುನಾನಿ ಕುರಿತಾಗಿ ತಪ್ಪು ದಾರಿಗೆ ಎಳೆಯುವ ಜಾಹೀರಾತುಗಳನ್ನು ನಿಷೇಧಿಸುವ, 1945ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ನಿಯಮಾವಳಿಯಲ್ಲಿನ 170ನೇ ನಿಯಮವನ್ನು ಕೈಬಿಡುವ ಬಗ್ಗೆ ಆಯುಷ್ ಸಚಿವಾಲಯ ಹೊರಡಿಸಿದ್ದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.
ನವದೆಹಲಿ: ಆಯುರ್ವೇದ, ಸಿದ್ಧ ಮತ್ತು ಯುನಾನಿ ಕುರಿತಾಗಿ ತಪ್ಪು ದಾರಿಗೆ ಎಳೆಯುವ ಜಾಹೀರಾತುಗಳನ್ನು ನಿಷೇಧಿಸುವ, 1945ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ನಿಯಮಾವಳಿಯಲ್ಲಿನ 170ನೇ ನಿಯಮವನ್ನು ಕೈಬಿಡುವ ಬಗ್ಗೆ ಆಯುಷ್ ಸಚಿವಾಲಯ ಹೊರಡಿಸಿದ್ದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ್ ಮೆಹ್ತ ಅವರನ್ನು ಒಳಗೊಂಡ ನ್ಯಾಯಪೀಠವು 'ಮುಂದಿನ ಆದೇಶದವರೆಗೆ ಈ ತಡೆ ಜಾರಿಯಲ್ಲಿರಲಿದೆ' ಎಂದು ತಿಳಿಸಿದ್ದಾರೆ.
ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಯಂತ್ರಿಸಬೇಕು. ಈ ನಿಟ್ಟಿನಲ್ಲಿ ಜಾಹೀರಾತು ಪ್ರಸಾರಕ್ಕೆ ಅನುಮತಿ ನೀಡುವ ಮೊದಲು 1994ರ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳ ಅನುಸಾರ ಜಾಹೀರಾತುದಾರರಿಂದ ಸ್ವಯಂಘೋಷಣಾ ಪತ್ರವನ್ನು ಪಡೆಯುವಂತೆ ಮೇ 7ರಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.
ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ನಿಯಮಾವಳಿಯ 170ನೇ ನಿಯಮದಡಿಯಲ್ಲಿ ಯಾವುದೇ ಕ್ರಮ ಕೈಗೊಳ್ಳದಂತೆ 2023 ಆಗಸ್ಟ್ 29ರಂದು ಕೇಂದ್ರ ಸರ್ಕಾರವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳಿಗೆ ಪತ್ರ ಬರೆದಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್ ಮೇ 7ರಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.
'2023, ಆಗಸ್ಟ್ 29ರ ಪತ್ರವನ್ನು ಹಿಂಪಡೆಯುವ ಬದಲು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ನಿಯಮಾವಳಿಯ 170ನೇ ನಿಯಮವನ್ನು ರದ್ದುಗೊಳಿಸುವ ಬಗ್ಗೆ ಜುಲೈ 1ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಹೀಗೆ ಮಾಡುವ ಮೂಲಕ ನ್ಯಾಯಾಲಯವು ಮೇ 7ರಂದು ನೀಡಿರುವ ನಿರ್ದೇಶನಗಳಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ನಡೆದುಕೊಂಡಿದೆ' ಎಂದು ನ್ಯಾಯಾಲಯ ಚಾಟಿ ಬೀಸಿದೆ.
ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ಅವರು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ 'ಅಂತಿಮ ಅಧಿಸೂಚನೆ ಜಾರಿಗೆ ಮತ್ತಷ್ಟು ಸಮಯ ಬೇಕಾಗುವುದರಿಂದ ಗೊಂದಲಗಳು ಸೃಷ್ಟಿಯಾಗಬಾರದೆಂದು ಆಗಸ್ಟ್ 29ರಂದು ಪತ್ರ ಬರೆಯಲಾಗಿತ್ತು' ಎಂದು ತಿಳಿಸಿದ್ದಾರೆ.
ಆಗಸ್ಟ್ 29ರ ಪತ್ರವನ್ನು ಸಚಿವಾಲಯವು ತಕ್ಷಣ ಹಿಂಪಡೆಯಬೇಕು ಎಂದು ನ್ಯಾಯಾಲಯ ನಟರಾಜ್ ಅವರಿಗೆ ನಿರ್ದೇಶಿಸಿದೆ.
ಕೋವಿಡ್ ಲಸಿಕಾ ಅಭಿಯಾನ ಮತ್ತು ಆಧುನಿಕ ವೈದ್ಯ ಪದ್ಧತಿಯ ವಿರುದ್ಧ ಪತಂಜಲಿ ಸಂಸ್ಥೆ ಮತ್ತು ಯೋಗಗುರು ಬಾಬಾ ರಾಮ್‌ದೇವ್ ಅವರು ತಪ್ಪು ದಾರಿಗೆ ಎಳೆಯುವ ಜಾಹೀರಾತು ನೀಡಿದ್ದಾರೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘವು(ಐಎಂಎ) ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.