ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಕಾಸರಗೋಡು, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಯೂರಿ ಜ್ಞಾನವಿಕಾಸ ಕೇಂದ್ರದ ನೇತೃತ್ತ್ವದಲ್ಲಿ ಬದಿಯಡ್ಕದಲ್ಲಿ ಹಬ್ಬಗಳಲ್ಲಿ ಮಹಿಳೆಯರ ಪಾತ್ರ ವಿಷಯದಡಿ ಮಾಹಿತಿ ಕಾರ್ಯಾಗಾರ ಸಂಸ್ಕøತಿ ಭವನದಲ್ಲಿ ಆಯೋಜಿಸಲಾಯಿತು.
ಉದ್ಯಮಿ ನಿತ್ಯಾನಂದ ಶೆಣೈ ಬದಿಯಡ್ಕ ದೀಪ ಬೆಳಗಿಸಿ ಉದ್ಘಾಟಿಸಿ, ಹಬ್ಬಗಳು ಸಂತಸ ಪ್ರೀತಿ ಹಾಗೂ ಬಾಂಧವ್ಯದ ಬೆಸುಗೆಗಳಾಗಿವೆ. ಒಗ್ಗಟ್ಟಿನಿಂದ ಸಂತಸಗಳನ್ನು ಹಂಚಿಕೊಳ್ಳುವುದೇ ಹಬ್ಬದ ಲಕ್ಷ್ಯ. ಇದಕ್ಕೆ ಪೂರ್ವ ತಯಾರಿಯನ್ನು ಮಾಡುವವರೇ ಗೃಹಿಣಿಯರು. ನಮ್ಮ ಸಮಾಜದಲ್ಲಿ ಸ್ತ್ರೀಗೆ ಮಹತ್ತರವಾದ ಸ್ಥಾನವಿದೆ. ಅದರ ಹಿಂದೆ ಅವರ ಅವಿರತ ಶ್ರಮ, ತ್ಯಾಗ ಕಾರಣವಾಗುತ್ತದೆ ಎಂದರು.
ಕಾಸರಗೋಡು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಖಿಲೇಶ್ ನಗುಮುಗಂ, ಸಾಮಾಜಿಕ ಕಾರ್ಯಕರ್ತ ಅನಂತ ಕುಮಾರ್ ಬರ್ಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೇಮಲತಾ ರೈ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ಕವಿತಾ ಗಿರೀಶ್ ರೈ ಸ್ವಾಗತಿಸಿ, ಪ್ರಫುಲ್ಲ ವಂದಿಸಿದರು.