ನವದೆಹಲಿ: ಬೈಜುಸ್ ಕಂಪನಿಯ ವಿರುದ್ಧ ದಿವಾಳಿ ಸಂಹಿತೆಯ ಅಡಿಯಲ್ಲಿ ಕ್ರಮ ಜರುಗಿಸುವುದನ್ನು ರದ್ದುಪಡಿಸಿ, ಕಂಪನಿಯು ಬಿಸಿಸಿಐಗೆ ₹158.9 ಕೋಟಿ ಪಾವತಿಸುವುದಕ್ಕೆ ಸಮ್ಮತಿ ಸೂಚಿಸಿದ್ದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ಅಮೆರಿಕದ ಮೂಲದ ಸಾಲದಾತ ಸಂಸ್ಥೆ ಗ್ಲಾಸ್ ಟ್ರಸ್ಟ್ ಕಂಪನಿಯು ಎನ್‌ಸಿಎಲ್‌ಎಟಿ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು, ಬೈಜುಸ್ ಕಂಪನಿಯಿಂದ ಪಡೆದಿರುವ ₹158.9 ಕೋಟಿ ಮೊತ್ತವನ್ನು ಮುಂದಿನ ಆದೇಶ ಬರುವವರೆಗೆ ಪ್ರತ್ಯೇಕ ಖಾತೆಯೊಂದರಲ್ಲಿ ಇರಿಸುವಂತೆ ಸೂಚಿಸಿದೆ.