ನವದೆಹಲಿ: ತೆರಿಗೆ ಬಾಕಿ ವಸೂಲಿಗಾಗಿ ನೀಡಿರುವ ನೋಟಿಸ್‌ಗೆ ಸಂಬಂದಿಸಿ, ಕಾಂಗ್ರೆಸ್ ಪಕ್ಷ ಸಲ್ಲಿಸಿರುವ ಅರ್ಜಿ ಕುರಿತು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ವಿಚಾರಣೆ ಮುಂದುವರಿಸಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
₹ 100 ಕೋಟಿ ಬಾಕಿ ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ಗೆ ನೀಡಿದ್ದ ನೋಟಿಸ್‌ಗೆ ತಡೆಯಾಜ್ಞೆ ನೀಡಲು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಇತ್ತೀಚೆಗೆ ನಿರಾಕರಿಸಿತ್ತು.
ತಡೆಯಾಜ್ಞೆಗಾಗಿ ಐಎಟಿಎಗೆ ಅರ್ಜಿ ಸಲ್ಲಿಸುವಂತೆ ಮಾರ್ಚ್ 13ರಂದು ಹೈಕೋರ್ಟ್ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಎನ್.ಕೋಟೀಶ್ವರ್ ಸಿಂಗ್ ಅವರು ಇದ್ದ ನ್ಯಾಯಪೀಠ, ಕಾಂಗ್ರೆಸ್ ಪಕ್ಷದ ಅರ್ಜಿ ವಿಚಾರಣೆ ನಡೆಸಿತು.
'ಐಟಿಎಟಿಯ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಮೇಲ್ಮನವಿ ಸಲ್ಲಿಸಿದೆ. ಹಾಗಾಗಿ, ಇದೇ ವಿಚಾರವಾಗಿ ಮತ್ತೆ ಐಟಿಎಟಿಗೇ ಅರ್ಜಿ ಸಲ್ಲಿಸುವಂತೆ ಕಾಂಗ್ರೆಸ್‌ಗೆ ಹೈಕೋರ್ಟ್ ಸೂಚಿಸಲು ಹೇಗೆ ಸಾಧ್ಯ' ಎಂದು ಪ್ರಶ್ನಿಸಿದ ನ್ಯಾಯಪೀಠ, 'ತನ್ನ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿ ಹೈಕೋರ್ಟ್ ಕೈಗೊಂಡ ನಿರ್ಣಯ ಸರಿ ಇಲ್ಲ' ಎಂದು ಹೇಳಿದೆ.
ಆದಾಯ ತೆರಿಗೆ ಇಲಾಖೆ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್.ವೆಂಕಟರಾಮನ್, 'ಬಾಕಿ ಇರುವ ಆದಾಯ ತೆರಿಗೆಯನ್ನು ಈಗಾಗಲೇ ವಸೂಲು ಮಾಡಲಾಗಿದೆ. ಈಗ, ಉದ್ಭವಿಸಿರುವ ಪ್ರಶ್ನೆ ಕುತೂಹಲಕ್ಕೆ ಸಂಬಂಧಿಸಿದ್ದಷ್ಟೆ' ಎಂದು ಪೀಠಕ್ಕೆ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ವಿವೇಕ್ ತಂಖಾ, 'ಹೈಕೋರ್ಟ್ ತನಗಿರುವ ಅಧಿಕಾರ ಚಲಾಯಿಸಿ, ಕನಿಷ್ಠ ಪಕ್ಷ ತೆರಿಗೆ ಬಾಕಿ ವಸೂಲಿ ನೋಟಿಸ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕಿತ್ತು' ಎಂದರು.
ನಂತರ, ಆದಾಯ ತೆರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿದ ಪೀಠ, 'ತನ್ನ ಮುಂದಿರುವ ಅರ್ಜಿ ಕುರಿತಂತೆ ಐಟಿಎಟಿ ನಿರ್ಧಾರ ಕೈಗೊಳ್ಳುವುದಕ್ಕೆ ಈ ರಜಾಕಾಲದ ವಿಶೇಷ ಅರ್ಜಿ ಅಡ್ಡಿಯಾಗುವುದಿಲ್ಲ' ಎಂದು ಸ್ಪಷ್ಟಪಡಿಸಿದೆ.