HEALTH TIPS

ಇಂದು ಡಾ.ಮೊಗಸಾಲೆಯವರಿಗೆ ಪೌರ ಸನ್ಮಾನ: ವಿಶೇಷ ಬರಹ: ಪರಿಸರ ಕಾಳಜಿ ತುಂಬಿರುವ ಮೊಗಸಾಲೆ ಕಾದಂಬರಿಗಳು:ಬರಹ: ಪ್ರೊ. ಪಿ ಎನ್ ಮೂಡಿತ್ತಾಯ


ಡಾ. ನಾ. ಮೊಗಸಾಲೆ ಅವರ ಮೂರು ಕಾದಂಬರಿಗಳ ಹುರುಳು, ತಿರುಳುಗಳ ವಿಶ್ಲೇಷಣೆ ಇಲ್ಲಿ ನನ್ನ ಉದ್ದೇಶ.ಅದೂ ಓದಿ ಒಂದಷ್ಟು ದಿನಗಳು ಕಳೆದಾಗ ಒಂದು ಪುಸ್ತಕದ ವಸ್ತು ಚಹರೆ ಬೇರೆ ಬೇರೆ ಓದುಗರ ಮನೋಭಿತ್ತಿಗಳಲ್ಲಿ ವಿಭಿನ್ನವಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಪುರಾವೆಯಾಗಿಯೂ ಗೀಚಲು ತೊಡಗಿದ್ದೇನೆ. ಉದ್ದವಾಗ ಕೂಡದೆಂಬ ಎಚ್ಚರವೂ ಜೊತೆಗಿದೆ ..

ಸೀತಾಪುರವೆಂಬ ಪಂಚಾಯತ್ ವ್ಯಾಪ್ತಿಯಲ್ಲಿ ರಾಗಣ್ಣ ಮತ್ತು
ಸೂರಪ್ಪ ಎಂಬ ಇಬ್ಬರ ಅಪರಾಧಪ್ರಜ್ಞೆ ಹಾಗೂ ಪ್ರಾಯಶ್ಚಿತ್ತ ಒಂದು ಗುಡ್ಡಗಾಡಿಗೆ ಹಾನಿ ಮಾಡುವ ಧ್ವನಿಪೂರ್ಣವಾದ "ಧರ್ಮಯುದ್ಧ" ಪಂಚಾಯತ್ ವ್ಯಾಪ್ತಿಯ ಹಿಡಿತವೂ ತಪ್ಪಿ ಅನಿರೀಕ್ಷಿತ ತಿರುವನ್ನು ತರುವ ಪ್ರಾಕೃತಿಕ ದುರಂತ ಕಥೆ: ನನ್ನ ಮಟ್ಟಿಗೆ ಇಲ್ಲಿ ನಡೆದಿರುವುದು ಧರ್ಮ ಯುದ್ಧವಲ್ಲ ಅದು ಮನುಷ್ಯ ಸಹಜವಾದ ಕೀಳರಿಮೆ, ಅಪರಾಧ ಪ್ರಜ್ಞೆ, ಅನಕ್ಷರತೆ, ಅಜ್ಞತೆಗಳಿಂದ ನಡೆದ ಸ್ಫೋಟ. ಎಲ್ಲೂ ಇದು ಆಗುವುದು ಹೀಗೇ. ಮನುಷ್ಯರ ಪ್ರತಿಷ್ಠೆ ಸೇರಿದರಂತೂ ಅನಾಹುತವೆ.

ಸೂರಪ್ಪನ ಬಾವಿಯಲ್ಲಿ ಒಂದೆರಡಲ್ಲ ಸಾಲಾಗಿ ಮೂರು ಕರಿ ಬೆಕ್ಕುಗಳು ಬಿದ್ದು ಸತ್ತಿವೆ ಅಥವಾ ಸತ್ತುಬಿದ್ದಿವೆ. ಹಿಂದೆ ಒಂದು ಹಂದಿಯನ್ನು ಕೊಂದಿರುತ್ತಾನೆ. ಅದನ್ನು ರಾಜಕೀಯದ ಮೂಲಕ 
ಮುಚ್ಚಿ ಹಾಕಲಾಗಿದೆ. ಹಾಗೆಂದು ಪಾಪಪ್ರಜ್ಞೆ ಸಾಯಲುಂಟೆ? ತನ್ನ ಬಾವಿಯಲ್ಲಿ ಬೆಕ್ಕುಗಳ ಶವ ಇರುವುದು  ಪಂಜುರ್ಲಿಯ ಶಾಪದ ನಿಮಿತ್ತ ಎಂದು ಯಾರೋ ಊದಿಕೊಟ್ಟದ್ದನ್ನು ನಂಬಿ ಅಲ್ಲೊಂದು ಗುಡಿ ಕಟ್ಟಿಸುವ ಮನಸ್ಸಾಗಿ ಅದು ತನ್ನೊಬ್ಬನಿಂದಾಗದೆಂದು ಹೊಳೆದು ಸಾರ್ವಜನಿಕರಲ್ಲಿ ಬೇರೆಯೇ ರೀತಿ ವ್ಯಾಖ್ಯಾನಿಸಿ ಅಭಿಪ್ರಾಯವನ್ನು ಮೂಡಿಸುವಲ್ಲಿ ಯಶಸ್ಸು ಹೊಂದುತ್ತಾನೆ. ಹಾಗೆ ಪಂಜುರ್ಲಿಗೆ ಬೆಟ್ಟದ ಮೇಲೆ ಗುಡಿಯ ಸ್ಥಾಪನೆ ಊರವರ ಯೋಜನೆಯಾಗುತ್ತದೆ. ಇನ್ನು ರಸ್ತೆ ನಿರ್ಮಾಣ ಹಾಗೂ ಮರ ಮಟ್ಟುಗಳ ನಾಶಕ್ಕೆ ಮರುಗುವ ಅಥವಾ ವಿರೋಧಿಸುವ ಮನಸ್ಸುಗಳು ದಮನಿಸಲ್ಪಟ್ಟ ಸನ್ನಿವೇಶ ಮುಂದಿನದು.


ಗುಡಿ ಎದ್ದು ಅದರ ಉದ್ಘಾಟನೆಯ ದಿನ ಪ್ರಮುಖ ವ್ಯಕ್ತಿಗಳ ನಡುವೆ ಜಗಳ ಆಗುತ್ತದೆ. ಬೆಕ್ಕುಗಳನ್ನು ಬಾವಿಗೆ ಹಾಕಿದ್ದ ಕುಡುಕ ರಾಗಣ್ಣನಿಗೆ ಅದರೊಳ ಗುಟ್ಟು ಗೊತ್ತಿತ್ತು ತಾನೆ. ಅವನು ತನ್ನನ್ನು ನಿಯಂತ್ರಿಸಿಕೊಳ್ಳಲಾಗದೆ ಹೆಜ್ಜೇನ ಗೂಡಿಗೆ ಕಲ್ಲೆಸೆಯುತ್ತಾನೆ. ಅಲ್ಲಿಗೆ ಮಂಗಳ ಕಾರ್ಯಕ್ರಮಕ್ಕೆ ಭಾರೀ ವಿಘ್ನವಾಗಿ ಜನರೆಲ್ಲ ಚೆಲ್ಲಾಪಿಲ್ಲಿ‌ಯಾಗಿ ಓಡಿಹೋಗುತ್ತಾರೆ. ಸಾರಾಂಶದಲ್ಲಿ ಇಂತಹ ಕೊನೆ ನಾಟಕೀಯ ಅನ್ನಿಸಬಹುದು. ಆದರೆ ಕಾದಂಬರಿಕಾರ ಸಹಜವೆಂಬಂತೆ ಬರೆದಿರುವಲ್ಲಿ ಅಮೋಘ ಕಲೆಗಾರಿಕೆ ಇದೆ!

ಪ್ರಕೃತಿ ಪರಿಸರಕ್ಕೆ ಅಜ್ಞಾನಿಗಳ ಮೂಢ ನಂಬಿಕೆಯಿಂದಾಗಿ
ಏನೆಂಥ ಹಾನಿಯಾಗುತ್ತದೆಂಬುದನ್ನು ಕಾದಂಬರಿಕಾರ ಹೇಳದೇ ಹೇಳಿದ್ದಾನೆಂದು ನಾನು ಭಾವಿಸುತ್ತೇನೆ. ಕಾದಂಬರಿಯೊಳಗೆ ಹುದುಗಿದ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು  ಬೋಧಿಸ ಹೋಗದೆ ಕಥೆಯಾಗಿಯೇ ಉಳಿಯುವಂತೆ ಮಾಡಿ ಇದು ಅಧಾರ್ಮಿಕ ಧರ್ಮೋದ್ಧಾರದ ರೀತಿ ಎಂದು ನಿರೂಪಿಸುವ ತಂತ್ರಗಾರಿಕೆ ಇಲ್ಲಿ ಗಮನಾರ್ಹ. ಹಾಗೆಂದು ಎಲ್ಲೂ ಧರ್ಮಗಳ ಲೇವಡಿ ಇಲ್ಲ. ಯಾಕೆಂದರೆ ಬೌದ್ಧಿಕ ಕಸರತ್ತು ಅಥವಾ ನಿಶಿತ ವಿಮರ್ಶೆಯ ಸುಳಿವೂ ವೈಚಾರಿಕತೆಯೂ ಇಲ್ಲ.

ಎರಡು ಪುಟ್ಟ ಕುಟುಂಬಗಳು, ಅವುಗಳ ಸುತ್ತ ಒಂದು ಸಮಾಜ, ಅದರೊಳಗೆ ಎರಡು ಗುಂಪು, ಅದಕ್ಕೆ ಆವರಣವಾಗಿ ರೋಗಗ್ರಸ್ಥ ರಾಜಕೀಯದ ಆಕ್ರಮಣಕಾರಿ ಪ್ರವೃತ್ತಿ ತುಂಬಿದ "ನೀರು" ಅದ್ಭುತ ಕಲಾಸೃಷ್ಟಿ. ಪರಿಸರ ಕಾಳಜಿಯ ಪ್ರಬಂಧ ಬರೆದರೆ ಏಕತಾನತೆ ಇರುತ್ತದೆ. ಅದೆಂದಿಗೂ ಒಂದು ಕಲಾಸೃಷ್ಟಿ ಎನಿಸದು. ನೀರುನಲ್ಲಿ ಒಂದು ಮದಕದ ಮೌನ ಪಾತ್ರವನ್ನು ಓದುಗ ಗೌರವದಿಂದ ನೆನೆಯಬೇಕು. ಅಣ್ಣ ತಮ್ಮಂದಿರಿಗಾಗಿ ಪಿತ್ರಾರ್ಜಿತ ತೋಟ ಎರಡಾಗಿ ವಿಂಗಡಿಸಲ್ಪಟ್ಟಾಗ ಮದಕ ತಮ್ಮನ ಪಾಲಿಗೆ ಬರುತ್ತದೆ. ಆದರೆ ಅದರ ನೀರಿನಲ್ಲಿ ಅಣ್ಣನಿಗೆ ಪಾಲಿದೆ. ಅಣ್ಣ ಒಂದು ಬೋರ್ವೆಲ್ ತೋಡಿಸುತ್ತಾನೆ. ಧಾರಾಳ ನೀರು ಅದರಲ್ಲಿರುತ್ತದೆ. ಅಷ್ಟು ನೀರಿದ್ದೂ ಮದಕದ ನೀರಿನ ಹಕ್ಕನ್ನು ಆತ ಬಿಡಲಿಲ್ಲ ಎಂಬ ವ್ಯಥೆ ತಮ್ಮನನ್ನು ಕುಟುಕುತ್ತದೆ. ನಂತರ ಅವನೂ ಬೋರ್ವೆಲ್ ತೋಡಿಸುತ್ತಾನೆ. ಒಳ್ಳೆ ನೀರು ಸಿಗುತ್ತದೆ.
ಮದಕ ಪಾಳು ಬಿದ್ದರೂ ಇಬ್ಬರೊಳಗಿನ ವಿವಾದ ತಣಿಯದು!
ಖಂಡಿತವಾಗಿ ಪಂಚಾಯತ್ ಆ ಮದಕವನ್ನು ಲಕ್ಷಾಂತರ ವ್ಯಯಿಸಿ ದುರಸ್ತಿ ಮಾಡಬೇಕಿತ್ತು ಎಂದು ಪರಿಸರ ಕಾಳಜಿಯುಳ್ಳ ಯಾರೂ ಚಿಂತಿಸಬಹುದಾದಂತೆ ಒಂದು ಪರೋಕ್ಷ ಚಿಂತನೆ ಇಲ್ಲಿ ಅಡಗಿದೆ. ಆದರೆ ಅದನ್ನು ಎಲ್ಲೋ ಒಂದೆಡೆ ಕಾದಂಬರಿಕಾರ ಸೂಚಿಸಿದರೂ ಅಭಿಪ್ರಾಯವನ್ನು ಮುನ್ನೆಲೆಗೆ ತರುವುದಿಲ್ಲ. ಅದರಿಂದಾಗಿ ಕಾದಂಬರಿಯ ಮುಖ್ಯ ಕಥಾವಸ್ತುವಿನ ಅಂದಗೆಡುವುದಿಲ್ಲ. ಈ ಕಾದಂಬರಿಯಲ್ಲಿ ಕಾಲ್ಪನಿಕ ಪಾತ್ರಗಳೂ ಸಮಕಾಲೀನ ಜೀವಂತ ಪಾತ್ರಗಳೂ ಜೊತೆಯಾಗಿರುವುದು ಬೇರೊಂದು ವಿಶೇಷ. ಕಾಸರಗೋಡಿನ ಸ್ಥಳಗಳು ನೀರಿನ ದಾರಿ ಗೊತ್ತಿರುವ ಜಲತಜ್ಞರ ಹೆಸರಿನ ಉಲ್ಲೇಖ, ಕಾಸರಗೋಡಿನ ಹಲವು ಸ್ಥಳನಾಮಗಳು ದಾಯಾದಿ ಜಗಳವೆಂಬ ಪಿಡುಗಿನ ಸಾರ್ವತ್ರಿಕತೆ, ಸಾರ್ವಕಾಲಿಕತೆಗೆ ಸಾಕ್ಷಿಯಾಗುತ್ತದೆ. ಈ ವ್ಯಂಗ್ಯ ತುಂಬ ಪರಿಣಾಮಕಾರಿ!


ಸಾಮುದಾಯಿಕ ಗೊಂದಲ, ವೋಟ್ ಬ್ಯಾಂಕಿನ ಹೀನ ಸುಳಿಗಳು ತುಂಬಿದ ಭಾರತ ಕಥಾ ಒಂದಕ್ಕಿಂತ ಒಂದು ಭಿನ್ನವೆನಿಸುವ ಕಥಾ ಪಾತ್ರಗಳ ಮೆರವಣಿಗೆಯಂತಿದೆ. ಅದರೊಳಗಿನಿಂದ ಮೂಡುವ ಕೊಳಕು ರಾಜಕಾರಣದ ಕಥನ ತುಂಬ ರೋಚಕ. ಇದರಲ್ಲಿ ಒಬ್ಬ ಜನಾನುರಾಗಿ ವೈದ್ಯರು, ದೇಶಾಭಿರಾಮದ ಹೊಟೆಲ್ ಓನರ್,  ಜನರಿಗೆಲ್ಲ ಬೇಕಾದ ಅಧ್ಯಾಪಕರು, ಅವರ ಆರಾಧಕರಾದ ಸಾತ್ವಿಕ ನಡೆಯ ಮರ್ಯಾದಸ್ಥರ ಪ್ರತಿನಿಧಿಗಳು. ಪಕ್ಷ ರಾಜಕೀಯಕ್ಕೆ ಸೇರಿದಾಗ ಹಳ್ಳಿಯೊಳಗೆ ಗುಂಪುಗಳಾಗುವುದು, ಆಕ್ರಮಣಕಾರಿ ನಡೆಯುಳ್ಳ ವ್ಯಕ್ತಿಗಳ ಕೈಕೆಳಗೆ ಅವರು ಬೇರೆ ಬೇರೆ ರೀತಿಯಲ್ಲಿ ಪ್ರಚೋದಿಸಲ್ಪಡುವುದು, ಮಧ್ಯಂತರ ಚೇಲರ ಉಗಮ, ಅವರ ಬುಟ್ಟಿಯಲ್ಲಿ ಎಷ್ಟು ವೋಟುಂಟು ಎಂದು ಲೆಕ್ಕ ಹಾಕಿ ಎಂಎಲ್ಲೆ ಮೊದಲ್ಗೊಂಡು ನಾಯಕರು ಬೆಂಬಲ ನೀಡುವುದು. ವಂಚಕ ಶಿರೋಮಣಿಯಾಗಿ ತನ್ನ ಚೇಲ ಮರೆಯಲ್ಲಿ ಗ್ರಾಮಾಭ್ಯುದಯಕ್ಕೆ ವಿರೋಧಿಯಾಗಿದ್ದರೂ ಹತಾಶೆಗೊಳ್ಳದೆ ಬೆಂಬಲಿಸುವುದು, ಈ ಹಂತದಲ್ಲಿ ಆಡಳಿತಶಾಹಿ ಅಮಾನವೀಯವಾಗಿ ವರ್ತಿಸುತ್ತ ಜನ ವಿರೋಧಿಯಾದರೂ ಪ್ರಾಮಾಣಿಕರು ಭಯದಿಂದ, ಸಂಕೋಚದಿಂದ ಮೌನವಹಿಸುವುದು. ಹೀಗೆ ಕಾದಂಬರಿ ನಮ್ಮ ಸುತ್ತಮುತ್ತ ಬಹು ಸಂಖ್ಯೆಯಲ್ಲಿರುವ ಶಾಂತಿಪ್ರಿಯರ ಮೌನವೇ ಯುವಜನರ ಮಂಗಾಟಕ್ಕೆ ತುಪ್ಪ ಎರೆದಂತೆ ಪರಿಣಮಿಸುತ್ತದೆ ಎಂಬುದನ್ನು ಹೇಳದೆಯೇ ಧ್ವನಿಸಿ ಸಾರ್ಥಕ್ಯ ಹೊಂದುತ್ತದೆ.

ಕಾದಂಬರಿಕಾರನ ಯಶಸ್ಸು ಇರುವುದು ಇಲ್ಲೇ. ಮೊಗಸಾಲೆಯ ಹೆಚ್ಚಿನ ಕಾದಂಬರಿಗಳಲ್ಲಿ ವೈಚಾರಿಕತೆಯ ನೆರಳೂ ಇಲ್ಲ. ಕಥೆ ಅರಳುವ ರೀತಿ ಓದುಗನ ಮನಸ್ಸನ್ನು ಪೂರ್ತಿ ತಲ್ಲೀನಗೊಳಿಸುವ ಕಾರಣ ಓದಿ ಮುಗಿಸಿದ ಕೆಲ ದಿನಗಳ ನಂತರ ಮಾತ್ರ ಹೂರಣ ಹೊಸರುಚಿ ತಾಳುತ್ತದೆ. 

ಕನ್ನಡ ಕಥಾಜಗತ್ತಿನಲ್ಲಿ ಈ ಕಾರಣದಿಂದಲೆ ಮೊಗಸಾಲೆಯವರು ವಿಶಿಷ್ಟ ಬರೆಹಗಾರನೆನಿಸುತ್ತಾರೆ. ಇದೊಂದು ಅಪೂರ್ವ ಚಿಕಿತ್ಸಕ ದೃಷ್ಟಿ ಎಂದು ಹೇಳಬಲ್ಲೆ. ರೋಗ ನಿದಾನದ ಬಳಿಕ ಔಷಧವನ್ನು ಹೇಳಿ ಅನುಪಾನ ಸರಿಮಾಡುತ್ತಾನೆಂದು ಖಾತ್ರಿಪಡಿಸಿಕೊಳ್ಳುವ ಜವಾಬ್ದಾರಿ ವೈದ್ಯನಿಗುಂಟು, ಸಾಹಿತಿಗೆ ಇರಬೇಕಾಗಿಲ್ಲ ಎಂಬ ಸತ್ಯವನ್ನು ಓದುಗರಾದ ನಾವು ತಿಳಿಯುತ್ತೇವೆ. ಸಮಾಜ ಅದರಷ್ಟಕ್ಕೆ ಚಿಂತಿಸುತ್ತಿರುವಾಗ ಕಥೆಗಾರ ಇನ್ನೊಂದು ಕಥೆ ಅಥವಾ ಕಾದಂಬರಿಯನ್ನು ಬರೆಯುತ್ತಿರುತ್ತಾನೆ!


ಮೊಗಸಾಲೆ ಅಷ್ಟೇ ಮಾಡುವವರಲ್ಲ. ವಿವಿಧ ಸಂಘ ಸಂಸ್ಥೆಗಳನ್ನು ಕಟ್ಟಿ ಅವೆಲ್ಲ ಸರಿಯಾಗಿ ನಡೆಯುತ್ತಿವೆ ಎಂದು ಖಾತ್ರಿಮಾಡಿಕೊಳ್ಳುವವರು. ಹಾಗಾಗಿಯೇ ವರ್ಧಮಾನ ಪ್ರಶಸ್ತಿ , ನಾಡಿಗೆ ನಮಸ್ಕಾರ, ಮುದ್ದಣ ಪ್ರಶಸ್ತಿಯಂತಹ ಆಂದೋಲನಗಳ ಮೂಲಕ ಸಮಾಜದ ಬಹುಮುಖಿ ಬೆಳವಣಿಗೆಯ ಹಿಂದಿನ ಚಾಲಕ ಶಕ್ತಿಯೂ ಆಗುತ್ತಾರೆ. 

                                                           ಬರಹ: * ಪ್ರೊ. ಪಿ ಎನ್ ಮೂಡಿತ್ತಾಯ

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries