ಬದಿಯಡ್ಕ: ಯತಿಗಳು ಸಮಾಜಕ್ಕೆ ಧರ್ಮದ ಮಾರ್ಗವನ್ನು ತೋರಿಸುವ ಶಕ್ತಿಗಳು. ಕಲಿಯುಗದಲ್ಲಿ ಸಮಾಜದ ಸಂಘಟನೆಯ ಮೂಲಕ ಈ ಕಾರ್ಯ ನಡೆಯಬೇಕು. ಕಾಲಕಾಲಕ್ಕೆ ಧರ್ಮ ಜಾಗೃತಿ ಕಾರ್ಯಕ್ಕೆ ಬೇಕಾದ ಮಾರ್ಗದರ್ಶನವನ್ನು ಯತಿಗಳು, ಪೂಜ್ಯರು, ಮಠಾಧಿಪತಿಗಳು ಮಾಡುತ್ತಾರೆ. ಧರ್ಮದ ಮಾರ್ಗದಲ್ಲಿ ಸಾಗಿ ಈಶ್ವರನ ಜೊತೆಗೆ ಸಾಯುಜ್ಯವನ್ನು ಕಾಣಬೇಕೆನ್ನುವುದು ನಮ್ಮ ಕಲ್ಪನೆ. ಭಕ್ತಿಗಿರುವ ಶಕ್ತಿ ಭಗವಂತನನ್ನೂ ಮೇಲೇಳಿಸುತ್ತದೆ. ವೈಯಕ್ತಿಕವಾಗಿ ಭಕ್ತಿಬೇಕು. ಸಮಾಜಕ್ಕೆ ಶಕ್ತಿ ಬೇಕು. ಇವೆರಡನ್ನೂ ಸಫಲವಾಗುವಂತೆ ಕರುಣಿಸುವವರು ಯತಿಗಳಾಗಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟರು.
ಸೋಮವಾರ ಬೆಳಗ್ಗೆ ಶ್ರೀ ಎಡನೀರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದವನ್ನು ಪಡೆದುಕೊಂಡು ನಡೆದ ಧರ್ಮಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ವಿಶಿಷ್ಟ ಪರಿಸ್ಥಿತಿಯಲ್ಲಿ ಶ್ರೀಕೃಷ್ಣನ ಜನನವಾಗಿದೆ. ತಂದೆ ತಾಯಿಯೊಂದಿಗೆ ಬೆಳೆಯಲು ಅವಕಾಶ ಸಿಗದ ಶ್ರೀಕೃಷ್ಣ ಧರ್ಮಕ್ಕಾಗಿ ತನ್ನ ಜೀವನದ ಪ್ರತಿಯೊಂದು ಆಯಾಮವನ್ನೂ ಅದಕ್ಕನುಗುಣವಾಗಿ ತಿರುಗಿಸಿದ. ಜೀವನಕ್ಕೆ ಉತ್ತರಮುಖಿಯಾಗಿ ಧರ್ಮವಿರಬೇಕು. ಸಜ್ಜನ ರಕ್ಷಣೆ, ದುರ್ಜನ ಶಿಕ್ಷೆಯು ಶ್ರೀಕೃಷ್ಣನ ಅವತಾರದ ತಳಹದಿ ಎಂದರು.
ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರು ಆಶೀರ್ವಚನವನ್ನು ನೀಡಿದರು. ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶ್ರೀಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ವಂದಿಸಿದರು. ಸೂರ್ಯನಾರಾಯಣ ಭಟ್ ನಿರೂಪಿಸಿದರು.