ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಸಂಖ್ಯೆ-49 ಹಾಗೂ ಭೂಮಿತ್ರಸೇನ ಕ್ಲಬ್ ಜಂಟಿ ಆಶ್ರಯದಲ್ಲಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನ ಆಚರಿಸಲಾಯಿತು.
ಎನ್ನೆಸ್ಸೆಸ್ ಯೋಜನಾಧಿಕಾರಿ ರೆಜೀಶ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವನು ತನ್ನ ಸ್ವಾರ್ಥ ಸಾಧನೆಗಾಗಿ ಪ್ರಕೃತಿ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ನಾಶ ಪಡಿಸುತ್ತಿದ್ದಾನೆ. ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸುವತ್ತ ಗಮನ ಹರಿಸದಿದ್ದರೆ ಪ್ರಾಕೃತಿಕ ಸಮತೋಲನ ಹಳಿ ತಪ್ಪಿ ಮುಂದಿನ ಪೀಳಿಗೆ ಸಂಕಷ್ಟಕ್ಕೀಡಾಗುವುದು. ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 28 ರಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನ ಆಚರಿಸಲಾಗುತ್ತದೆ ಎಂದರು.
ಕಾಲೇಜು ಭೂಮಿತ್ರ ಸೇನೆ ಸಂಯೋಜಕ ಮನೋಜ್ ಕುಮಾರ್ ಪಿ. ಮಾತನಾಡಿ, ಮಾನವನು ತನ್ನ ಅತಿ ಆಸೆಯಿಂದ ಪ್ರಕೃತಿಯನ್ನು ಕೊಳ್ಳೆ ಹೊಡೆಯುತ್ತಿದ್ದಾನೆ. ಪರಿಸರವೇ ಬರಿದಾಗುತ್ತಿದೆ. ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ, ನೀರು, ಮಣ್ಣು, ಖನಿಜಗಳು, ಪ್ರಾಣಿಪಕ್ಷಿಗಳು ಹಾಗೂ ಸಸ್ಯ ವರ್ಗಗಳು ಕ್ಷೀಣಿಸುತ್ತಿದೆ. ಇದರಿಂದ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆಯಂತಹ ಸಮಸ್ಯೆಗಳು ಎದುರಾಗುತ್ತಿವೆ. ನಾವು ಪ್ರಕೃತಿಯನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿ, ಅದನ್ನು ಸಂರಕ್ಷಿಸುವ ಕ್ರಮ ಕೈಗೊಳ್ಳಬೇಕು. ಪ್ರಕೃತಿಯನ್ನು ಉಳಿಸುವ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು, ಅಭಿಯಾನಗಳು ಹಾಗೂ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಭವ್ಯ ಬಿ.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ "ನಮ್ಮ ಜೀವನದಲ್ಲಿ ಪ್ರಕೃತಿಯ ಪಾತ್ರ” ಹಾಗೂ ಮಹತ್ವ ವಿಷಯದ ಕುರಿತು ತರಗತಿ ನೀಡಿದರು. ಎನ್ನೆಸ್ಸೆಸ್ ಸ್ವಯಂ ಸೇವಕರು ಪ್ರಕೃತಿ ಸಂರಕ್ಷಣಾ ಪ್ರತಿಜ್ಞೆ ಸ್ವೀಕರಿಸಿದರು. ಸ್ವಯಂ ಸೇವಕಿ ಅರ್ಚನ ಸ್ವಾಗತಿಸಿದರು. ಹರ್ಷಿತಾ ವಂದಿಸಿದರು. ಗಣೇಶಕೃಷ್ಣ ನಿರೂಪಿಸಿದರು.