ಹೋಶಿಯಾರ್‌ಪುರ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪಂಜಾಬ್ ಹಾಗೂ ಹರಿಯಾಣದಲ್ಲಿ ರೈತರು ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದರು.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ಈ ಮೆರವಣಿಗೆ ನಡೆಯಿತು.
ಅಮೃತಸರದಲ್ಲಿ 600 ಟ್ರ್ಯಾಕ್ಟರ್‌ಗಳು ತ್ರಿವರ್ಣ ಹಾಗೂ ರೈತರ ಸಂಘದ ಧ್ವಜವನ್ನು ಪ್ರದರ್ಶಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡವು. ರೈತ ನಾಯಕ ಸರವಣ ಸಿಂಗ್ ಪಂಢೇರ್ ನೇತೃತ್ವದಲ್ಲಿ ಅಟ್ಟಾರಿ ಗಡಿಯಿಂದ ಆರಂಭವಾದ ಮೆರವಣಿಗೆ 30 ಕಿ.ಮೀ ಚಲಿಸಿ ಗೋಲ್ಡನ್ ಗೇಟ್‌ವರೆಗೂ ಸಂಚರಿಸಿತು.
ಬೆಲೆಗಳಿಗೆ ಕನಿಷ್ಠ ಬೆಂಬಲ ದರ ನಿಗದಿ ಪಡಿಸದೇ ಇರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಂಢೇರ್, ಇದರಿಂದ ರೈತರಿಗೆ ಸರಿಯಾದ ದರ ಸಿಗುತ್ತಿಲ್ಲ ಎಂದರು.
ಇದೇ ವೇಳೆ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಪ್ರತಿಯನ್ನು ಸುಟ್ಟು ಹಾಕಿದ ರೈತರು, ಈ ಕಾನೂನುಗಳಿಂದ ಮಾನವ ಹಕ್ಕುಗಳಿಗೆ ಮೊಟಕುಂಟಾಗುತ್ತಿದೆ ಎಂದರು.
ಅಲ್ಲದೆ ತಮ್ಮ ಬೇಡಿಕೆ ಈಡೇರುವವರೆಗೂ ಶಂಭು ಗಡಿಯಲ್ಲಿ ಹಾಗೂ ಖಾನೌರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ ಆಗಸ್ಟ್ 31ರಂದು ದೆಹಲಿ ಚಲೋ ಅಭಿಯಾನಕ್ಕೆ 200 ದಿನ ತುಂಬಲಿದ್ದು, ಅಂದು ಈ ಎರಡೂ ಸ್ಥಳಗಳಲ್ಲಿ ಮಹಾ ಪಂಚಾಯತ್‌ಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಹೋಶಿಯಾರ್‌ಪುರದಲ್ಲಿ ಆಜಾದ್ ಕಿಸಾನ್ ಕಮಿಟಿ ನಾಯಕ ಹರ್ಪಲ್ ಸಿಂಗ್ ನೇತೃತ್ವದಲ್ಲಿ ಹುಕ್ರನ್ ಗ್ರಾಮದಿಂದ ಜಿಲ್ಲಾಡಳಿತ ಕಚೇರಿ ಸಂಕೀರ್ಣದವರೆಗೂ ಟ್ರ್ಯಾಕ್ಟರ್ ಮೆರವಣಿಗೆ ನಡೆಯಿತು. ಅಲ್ಲಿಯೂ ಮೂರು ಕಾನೂನುಗಳ ಪ್ರತಿಯನ್ನು ಸುಟ್ಟು ಹಾಕಲಾಯಿತು.