ಕಾಸರಗೋಡು: ಕುಂಚ ಬರಹ ಕಲಾವಿದರ ಸಂಘ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಒಂದು ದಿನದ ಕಲಾ ಶಿಬಿರ ವಿದ್ಯಾನಗರದ ಅಸಾಪ್ ಸ್ಕಿಲ್ ಪಾರ್ಕ್‍ನಲ್ಲಿ ಜರುಗಿತು. ವಯನಾಡು ದುರಂತದಲ್ಲಿ ಮಡಿದವರಿಗೆ ನಿಧಿ ಸಂಗ್ರಹಕ್ಕಾಗಿ ಜಿಲ್ಲಾಡಳಿತದ ಸಹಕಾರದೊಂದಿಗೆ ಲಿಂಕ್ ಗ್ರೂಪ್ ಲಯನ್ಸ್ ಕ್ಲಬ್ ಆಫ್ ಚಂದ್ರಗಿರಿ ವತಿಯಿಂದ ಶಿಬಿರ ಆಯೋಜಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಶಿಬಿರ ಉದ್ಘಾಟಿಸಿ ಮಾತನಾಡಿ, ನಾಡಿನ ಸಮಸ್ತ ಜನತೆ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ದೈವನರ್ತನ ಕಲಾವಿದರು, ಆಟೋ ಕಾರ್ಮಿಕರು, ವಿದ್ಯಾರ್ಥಿಗಳು, ಕಲಾವಿದರು ಹೀಗೆ ನಾನಾ ಕ್ಷೇತ್ರಗಳ ಜನರು ಪರಿಹಾರ ನಿಧಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. ಲಯನ್ಸ್ ಕ್ಲಬ್ ಆಫ್ ಚಂದ್ರಗಿರಿ ಅಧ್ಯಕ್ಷ ಸಿ.ಎಲ್.ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ ತಯಾರಿಸಲಾದ ಚಿತ್ರದ ಮೊದಲ ಮಾರಾಟವನ್ನು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನಿರ್ವಹಿಸಿದರು. ಚಿತ್ರಕಲಾವಿದ ಪ್ರಕಾಶನ್ ಪುತ್ತೂರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಲಿಂಕ್ ಗ್ರೂಪ್ ನಿರ್ದೇಶಕ ಹರೀಶ್ ಕುಮಾರ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುಗೆಯಾಗಿ ನೀಡಿದ 20 ಸಾವಿರ ರೂ. ಮೊತ್ತವನ್ನು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರಿಗೆ ಹಸ್ತಾಂತರಿಸಲಾಯಿತು. ಡಿಟಿಪಿಸಿ ಕಾರ್ಯದರ್ಶಿ ಲಿಜೋ ಜೋಸೆಫ್, ಜಲೀಲ್ ಮುಹಮ್ಮದ್, ಮಹ್ಮದ್ ಇಬ್ರಾಹಿಂ, ಶಾಫಿ ನೆಲ್ಲಿಕುನ್ನು,ಶರೀಫ್ ಕಾಪಿಲ್ ಮತ್ತು ಬಾಲನ್ ಸೌತ್ ಉಪಸ್ಥಿತರಿದ್ದರು. ಚಿತ್ರ ಕಲಾವಿದರ ಸಂಘದ ಜಿಲ್ಲಾ ಕಾರ್ಯದರ್ಶಿ ವಿನೋದ್ ಶಿಲ್ಪಿ ಸ್ವಾಗತಿಸಿದರು. ಅಧ್ಯಕ್ಷ ನಾರಾಯಣನ್ ರೇಖಿತಾ ವಂದಿಸಿದರು.