ಮಾಲೆ: ಯುಪಿಐ ಪಾವತಿ ವ್ಯವಸ್ಥೆಯನ್ನು ಮಾಲ್ದೀವ್ಸ್‌ನಲ್ಲಿ ಜಾರಿಗೊಳಿಸುವ ಕುರಿತು ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ. 'ಇದು, ಪ್ರವಾಸೋದ್ಯಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ' ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಆಶಿಸಿದ್ದಾರೆ.
ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಮತ್ತು ಮಾಲ್ದೀವ್ಸ್‌ನ ಆರ್ಥಿಕ ಅಭಿವೃದ್ಧಿ ಸಚಿವಾಲಯದ ನಡುವೆ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ಒಪ್ಪಂದವಾಗಿದೆ ಎಂದು ಜೈಶಂಕರ್ 'ಎಕ್ಸ್' ಜಾಲತಾಣದ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.
ಮಾಲ್ದೀವ್ಸ್‌ನ ವಿದೇಶಾಂಗ ಸಚಿವ ಮೂಸಾ ಜಮೀರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್, 'ಭಾರತವು ಯುಪಿಐ ವ್ಯವಸ್ಥೆಯ ಮೂಲಕ ಡಿಜಿಟಲ್ ಪಾವತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ' ಎಂದು ತಿಳಿಸಿದರು.
'ಆರ್ಥಿಕ ಸೇರ್ಪಡೆಯನ್ನು ಭಾರತದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಲಾಗಿದೆ. ಇಂದು ಜಗತ್ತಿನ ಶೇ 40ರಷ್ಟು ಡಿಜಿಟಲ್ ಪಾವತಿ ವ್ಯವಸ್ಥೆಯು ಭಾರತದಲ್ಲೇ ಅಗುತ್ತಿದೆ. ನಿತ್ಯದ ಬದುಕಿನಲ್ಲಿ ನಾವು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಗಮನಿಸುತ್ತಿದ್ದೇವೆ' ಎಂದು ತಿಳಿಸಿದರು.
'ಭಾರತ ಮತ್ತು ಮಾಲ್ದೀವ್ಸ್ ಕೇವಲ ನೆರೆ ಹೊರೆ ರಾಷ್ಟ್ರಗಳಲ್ಲ. ಸಹಜ ಪಾಲುದಾರರು' ಎಂದು ಅಭಿಪ್ರಾಯಪಟ್ಟರು.
ಮಾಲ್ದೀವ್ಸ್‌ನ ವಿದೇಶಾಂಗ ಸಚಿವ ಜಮೀರ್, 'ಭಾರತ ನಮ್ಮ ಸ್ನೇಹಿ ರಾಷ್ಟ್ರ. ಅಭಿವೃದ್ಧಿಯಲ್ಲಿ ಎಂದಿಗೂ ಭಾಗಿಯಾಗಿರಲಿದೆ' ಎಂದು ಹೇಳಿದರು.
ಭಾರತ ಬೆಲೆಕಟ್ಟಲಾದ ಪಾಲುದಾರ -ಮಾಲ್ದೀವ್ಸ್ ಅಧ್ಯಕ್ಷ
ಮಾಲೆ: ಭಾರತ ಎಂದಿಗೂ ಮಾಲ್ದೀವ್ಸ್‌ನ ಹತ್ತಿರದ ಮೈತ್ರಿ ರಾಷ್ಟ್ರ. ಬೆಲೆಕಟ್ಟಲಾದ ಪಾಲುದಾರ. ಅಗತ್ಯ ಇದ್ದಾಗಲೆಲ್ಲಾ ಭಾರತ ನೆರವಾಗುತ್ತಿದೆ ಎಂದು ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಹೇಳಿದ್ದಾರೆ. ದ್ವೀಪರಾಷ್ಟ್ರದಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಗಳ ಕಾಮಗಾರಿ ಪೂರ್ಣಗೊಂಡ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತದ ಸಾಲ ನೆರವು ಕಾರ್ಯಕ್ರಮದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಭಾರತದ ಸಾಲ ನೆರವು ಕಾರ್ಯಕದವು ಆರ್ಥಿಕ ಅನುಕೂಲತೆ ಕಲ್ಪಿಸಿದೆ. ಸ್ಥಳೀಯವಾಗಿ ಆರ್ಥಿಕತೆ ಅಭಿವೃದ್ಧಿಗೆ ನೆರವಾಗಿದೆ. ದೇಶದ ಅಭ್ಯುದಯಕ್ಕೆ ನೆರವಾಗಿದೆದೆ. ಉಭಯ ದೇಶಗಳ ಮೈತ್ರಿಯಲ್ಲಿ ಗಣನೀಯ ಮೈಲುಗಲ್ಲಾಗಿವೆ ಎಂದು ಅವರು ಹೇಳಿದರು.