ಪಣಜಿ: ಈ ಬಾರಿ ರಕ್ಷಾ ಬಂಧನವು ಗೋವಾದ 43 ವರ್ಷದ ಮಹಿಳೆಯೊಬ್ಬರ ಪಾಲಿಗೆ ವಿಶೇಷ ಕ್ಷಣವಾಗಿತ್ತು. ಕಿಡ್ನಿ ಕೊಟ್ಟು ಜೀವ ಉಳಿಸಿದ ತಮ್ಮನಿಗೆ ರಾಖಿ ಕಟ್ಟಿ ಭಾವುಕರಾದರು.
ಪಣಜಿ: ಈ ಬಾರಿ ರಕ್ಷಾ ಬಂಧನವು ಗೋವಾದ 43 ವರ್ಷದ ಮಹಿಳೆಯೊಬ್ಬರ ಪಾಲಿಗೆ ವಿಶೇಷ ಕ್ಷಣವಾಗಿತ್ತು. ಕಿಡ್ನಿ ಕೊಟ್ಟು ಜೀವ ಉಳಿಸಿದ ತಮ್ಮನಿಗೆ ರಾಖಿ ಕಟ್ಟಿ ಭಾವುಕರಾದರು.
ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಅಕ್ಕನಿಗೆ 35 ವರ್ಷದ ವ್ಯಕ್ತಿ ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಕಿಡ್ನಿ ದಾನ ಮಾಡಿದ್ದರು.
ಇಬ್ಬರ ಹೆಸರನ್ನು ಗೌಪ್ಯವಾಗಿಡಲು ಕುಟುಂಬದ ಸದಸ್ಯರು ಮನವಿ ಮಾಡಿದ್ದು, ಈ ಘಟನೆಯಿಂದ ಬೇರೆಯವರಿಗೆ ಪ್ರೇರಣೆಯಾದರೆ ಸಾಕು ಎಂದು ಹೇಳಿದ್ದಾರೆ.
'ಆಕೆಯ ಸಹೋದರನಿಗೆ ರಾಖಿ ಕಟ್ಟುವಾಗ ನನ್ನ ಪತ್ನಿ ಭಾವುಕಳಾದಳು. ಎಳವೆಯಿಂದಲೇ ಅವರಿಬ್ಬರು ಮಾದರಿಯೋಗ್ಯ ಅಕ್ಕ-ತಮ್ಮ' ಎಂದು ಮಹಿಳೆಯ ಪತಿ ಹೇಳಿದ್ದಾರೆ.
'ಮಹಿಳೆಯ ಮೂತ್ರಪಿಂಡದ ಕಾಯಿಲೆ ಅಂತಿಮ ಹಂತದಲ್ಲಿತ್ತು. ಹೀಗಾಗಿ ಅವರಿಗೆ ತುರ್ತು ಕಿಡ್ನಿ ಮರುಜೋಡಣೆ ಆಗಬೇಕಿತ್ತು' ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
'ವಿವಾಹಿತನಾಗಿರುವ ಸಹೋದರ, ಅಕ್ಕನಿಗೆ ಕಿಡ್ನಿ ದಾನ ಮಾಡಲು ಮುಂದಾಗಿದ್ದಾರೆ. ಮೊದಲು ಅವರಿಗೆ ಮೂತ್ರಕೋಶದ ಕಲ್ಲಿಗೆ ಚಿಕಿತ್ಸೆ ನೀಡಲಾಯಿತು. ಬಳಿಕ ಅಗತ್ಯ ಒಪ್ಪಿಗೆ ಪಡೆದು ಕಿಡ್ನಿ ಮರುಜೋಡಣೆ ಮಾಡಲಾಯಿತು' ಎಂದು ವೈದ್ಯರು ತಿಳಿಸಿದ್ದಾರೆ.