ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಂಪಾರೆಯ ವ್ಯಕ್ತಿಯೊಬ್ಬರ ಹಿತ್ತಿಲಲ್ಲಿ ಹಂದಿಗೆ ಇರಿಸಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ದಾರುಣವಾಗಿ ಮೃತಪಟ್ಟಿದೆ. ಇಲ್ಲಿನ ನಿವಾಸಿ ಅಣ್ಣಪ್ಪ ನಾಯ್ಕ್ ಎಂಬವರ ರಬ್ಬರ್ ತೋಟದಲ್ಲಿ ಯಾರೋ ಹಂದಿ ಬೇಟೆಗಾಗಿ ಉರುಳು ಇರಿಸಿದ್ದು, ಇದಕ್ಕೆ ಚಿರತೆ ಬಲಿಯಾಗಿದೆ. ಶುಕ್ರವಾರ ಘಟನೆ ನಡೆದಿದೆ. ಹೊಟ್ಟೆಯ ಭಾಗಕ್ಕೆ ಕುಣಿಕೆ ಬಿಗಿದು ನರಳಾಡುತ್ತಿದ್ದ ಶಬ್ದ ಕೇಳಿ ಅತ್ತ ತೆರಳಿದಾಗ ಚಿರತೆ ಕುಣಿಕೆಗೆ ಸಿಲುಕಿರುವುದು ಪತ್ತೆಯಾಗಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಚಿರತೆಯ ರಕ್ಷಣೆಗಾಗಿ ವಯನಾಡಿನಿಂದ ಅರವಳಿಕೆ ತಜ್ಞರನ್ನು ಕರೆಸಲಾಗಿದ್ದರೂ, ತಂಡ ತಲುಪುವ ಮೊದಲೇ ಚಿರತೆ ಅಸುನೀಗಿದೆ.
ಕಳೆದ ಕೆಲವು ದಿವಸಗಳಿಂದ ಪನತ್ತಡಿ ಸನಿಹದ ಪರಿಯಾರಂ ಕಾರ್ಯಂಗಾನ ಸೇರಿದಂತೆ ವಿವಿಧೆಡೆ ಹುಲಿ ಕಾಣಿಸಿಕೊಂಡಿರುವ ಬಗ್ಗೆ ವದಂತಿ ಹರಡಿದ್ದರೂ, ಹುಲಿ ಪತ್ತೆ ಸದ್ಯವಾಗಿರಲಿಲ್ಲ. ಎರಡು ದಿವಸಗಳ ಹಿಂದೆ ಪಾಣತ್ತೂರಿನಲ್ಲಿ ಸಾಕು ನಾಯಿಯನ್ನು ಹುಲಿ ಹಿಡಿದಿರುವುದಾಗಿಯೂ ಸ್ಥಳೀಯರು ತಿಳಿಸಿದ್ದರು.
ಸೋಮವಾರ ರಾತ್ರಿ ವಾಹನದಲ್ಲಿ ಸಂಚರಿಸುತ್ತಿದ್ದ ಪರಿಯಾರಂ ಕಾರ್ಯಂಗಾನ ನಿವಾಸಿ ನೌಶಾದ್ ಎಂಬವರಿಗೆ ಹುಲಿ ಕಾಣಿಸಿಕೊಂಡಿದ್ದು, ರಸ್ತೆಗೆ ಅಡ್ಡ ಸಂಚರಿಸಿದ ಹುಲಿ, ಸನಿಹದ ರಬ್ಬರ್ ತೋಟದತ್ತ ಸಾಗಿರುವುದಾಗಿ ತಿಳಿಸಿದ್ದರು.
ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ವಯ ಅರಣ್ಯಾಧಿಕಾರಿಗಳು ರಾತ್ರಿ ವೇಳೆ ಸ್ಥಳಕ್ಕಾಗಮಿಸಿ ಹುಡುಕಾಟ ಆರಂಭಿಸಿದ್ದರು. ಮಳೆ ಹಿನ್ನೆಲೆಯಲ್ಲಿ ಹುಲಿ ಹೆಜ್ಜೆ ಗುರುತಿಸಲು ಸಾಧ್ಯವಾಗಿರಲಿಲ್ಲ. ವರ್ಷದ ಹಿಂದೆಯೂ ಈ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಸಾಕು ನಾಯಿಗಳನ್ನು ಎತ್ತಿಕೊಂಡು ಹೋಗಿರುವ ನಿದರ್ಶನಗಳಿದ್ದು, ಮನುಷ್ಯರಿಗೆ ಇದುವರೆಗೆ ಯಾವುದೇ ಉಪಟಳ ನೀಡಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದರು. ಅರಣ್ಯಾಧಿಕಾರಿಗಳು ಹುಡುಕಾಟದ ಮಧ್ಯೆ ಚಿರತೆಯೊಂದು ಕುಣಿಕೆಗೆ ಸಿಲುಕಿ ಸಾವಿಗೀಡಾಗಿದೆ. ಬಂದಡ್ಕ ಸೆಕ್ಷನ್ ಅರಣ್ಯಾಧಿಕಾರಿ ರಾಜು ಅವರ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದ್ದಾರೆ. ಚರತೆಯ ಕಳೇಬರ ಮಹಜರು ನಡೆಸಿದ ನಂತರ ಸಂಸ್ಕರಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಎಣ್ಮಕಜೆ ಪಂಚಾಯಿತಿಯ ಸ್ವರ್ಗ ಸನಿಹ ಹಂದಿಗಾಗಿ ಇರಿಸಲಾಗಿದ್ದ ಕುಣಿಕೆಗೆ ಬೃಹತ್ ಗಾತ್ರದ ಚಿರತೆ ಸಿಲುಕಿ ಸಾವಿಗೀಡಾಗಿತ್ತು.