ನವದೆಹಲಿ: ಬಾಂಗ್ಲಾದೇಶದ ಸರ್ಕಾರಿ ಉದ್ಯೋಗದಲ್ಲಿನ ಮೀಸಲಾತಿ ವಿರೋಧಿಸಿ ಆರಂಭವಾದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡ ಬಳಿಕ ತಮ್ಮ ಪ್ರಧಾನಿ ಸ್ಥಾನ್ಕಕೆ ರಾಜೀನಾಮೆ ನೀಡಿ ಶೇಖ್ ಹಸೀನಾ ದೇಶದಿಂದ ಪಲಾಯನ ಮಾಡಿದರು. ಭಾರತದಲ್ಲಿ ಸುಮಾರು ಮೂರು ವಾರಗಳಿಂದ ಆಶ್ರಯ ಪಡೆದುಕೊಂಡಿದ್ದಾರೆ.
ಬಾಂಗ್ಲಾದೇಶದಲ್ಲಿ ರಚನೆಯಾಗಿರುವ ಮಧ್ಯಂತರ ಸರ್ಕಾರವು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿದೆ. ಇತ್ತೀಚೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಶೇಖ್ ಹಸೀನಾ ಹಾಗೂ ಅವರ ಸಲಹೆಗಾರರು, ಮಾಜಿ ಕ್ಯಾಬಿನೆಟ್ ಸದಸ್ಯರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿರುವುದಾಗಿ ಬಾಂಗ್ಲಾದೇಶದ ಗೃಹ ವ್ಯವಹಾರಗಳ ಸಚಿವಾಲಯದ ಭದ್ರತಾ ಸೇವೆಗಳ ವಿಭಾಗವು ತಿಳಿಸಿತು.
ಸರ್ಕಾರಿ ಮೂಲಗಳ ಪ್ರಕಾರ ಶೇಖ್ ಹಸೀನಾ ಅವರು ಈಗ ಹಿಂಪಡೆದಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ಹೊರತುಪಡಿಸಿ ಬೇರೆ ಯಾವುದೇ ಪಾಸ್‌ಪೋರ್ಟ್ ಹೊಂದಿಲ್ಲ. ಭಾರತೀಯ ವೀಸಾ ನೀತಿಯ ಅಡಿಯಲ್ಲಿ ರಾಜತಾಂತ್ರಿಕ ಅಥವಾ ಅಧಿಕೃತ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಬಾಂಗ್ಲಾದೇಶದ ನಾಗರಿಕರು ವೀಸಾ-ಮುಕ್ತ ಪ್ರವೇಶಕ್ಕೆ ಅರ್ಹರಾಗಿರುತ್ತಾರೆ. ಹಾಗೂ 45 ದಿನಗಳವರೆಗೆ ದೇಶದಲ್ಲಿ ಉಳಿಯಬಹುದಾಗಿದೆ. ಶೇಖ್ ಹಸೀನಾ ಅವರು ಈಗಾಗಲೆ ಭಾರತದಲ್ಲಿ 20 ದಿನಗಳನ್ನು ಕಳೆದಿದ್ದಾರೆ. ಹಾಗಾದ್ರೆ ಶೇಖ್ ಹಸೀನಾ ಅವರಿಗೆ ಇರುವ ಮುಂದಿನ ದಾರಿ ಏನು..?
ಒಬ್ಬರ ರಾಜತಾಂತ್ರಿಕ ಪಾಸ್‌ಪೋರ್ಟ್ ಒಮ್ಮೆ ರದ್ದುಗೊಂಡರೆ, ಅವರ ಕುಟುಂಬ ಸದಸ್ಯರ ಪಾಸ್‌ಪೋರ್ಟ್‌ಗಳು ಸ್ವಯಂಚಾಲಿತವಾಗಿ ರದ್ದಾಗುತ್ತವೆ. ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರು, ಹೊಸ ಸಾಮಾನ್ಯ ಪಾಸ್‌ಪೋರ್ಟ್ ಪಡೆಯುವ ಮೊದಲು ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಒಪ್ಪಿಸಬೇಕು ಎಂದು ಬಾಂಗ್ಲಾದೇಶದ ಗೃಹ ಸಚಿವಾಲಯದ ಭದ್ರಾತ ಸೇವೆಗಳ ವಿಭಾಗದ ಹಿರಿಯ ಕಾರ್ಯದರ್ಶಿ ಮೊಹಮ್ಮದ್ ಮುಶಿಯುರ್ ರೆಹಮಾನ್ ಹೇಳಿದ್ದಾರೆ.
ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದತಿಯಿಂದಾಗಿ ಶೇಖ್ ಹಸೀನಾ ಅವರನ್ನು ವಿದೇಶ ಪ್ರವಾಸದಿಂದ ನೇರವಾಗಿ ನಿಷೇಧಿಸಲಾಗಿದೆ. ಈಗ ಅವರನ್ನು ಬಾಂಗ್ಲಾದೇಶಕ್ಕೆ ಒಪ್ಪಿಸುವಂತೆ ಒತ್ತಾಯಿಸಬಹುದು. ಅಲ್ಲಿ ಅವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ಈಗಾಗಲೇ ಬಾಂಗ್ಲಾದಲ್ಲಿ ಹಸೀನಾ ಅವರ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಹಸೀನಾಳನ್ನು ಭಾರತದಿಂದ ಹಸ್ತಾಂತರಿಸುವಂತೆ ಬಾಂಗ್ಲಾದೇಶ ಒತ್ತಾಯಿಸಬಹುದು ಎಂದು ವಿದೇಶಾಂಗ ಸಚಿವ ತೌಹೀದ್ ಹುಸೇನ್ ಸೂಚಿಸಿದ್ದಾರೆ.