ವಯನಾಡು: ದೇವರ ನಾಡು ಕೇರಳದ ವಯನಾಡಿನಲ್ಲಿ ಮಂಗಳವಾರ (ಜುಲೈ 30) ಭಾರಿ ಮಳೆಗೆ ಸಂಭವಿಸಿದ ಬೃಹತ್ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಏರತ್ತಲೇ ಇದೆ. ಇದೀಗ ಸಾವಿನ ಸಂಖ್ಯೆ 360ಕ್ಕೆ ಏರಿಕೆಯಾಗಿದ್ದು, ಇನ್ನೂ ಮಣ್ಣಿನಡಿ ಹಾಗೂ ಅವಶೇಷಗಳಡಿ ಸಿಲುಕಿರುವ ಹಾಗೂ ಬದುಕುಳಿದಿರುವವರ ಪತ್ತೆಗಾಗಿ ನಿರಂತರವಾಗಿ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ.
ಇನ್ನು ಭಾರತೀಯ ಸೇನೆಯೊಂದಿಗೆ ಕೈಜೋಡಿಸಿರುವ ರಕ್ಷಣಾ ಪಡೆ, ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಡುತ್ತಿದೆ. ಈ ಮಧ್ಯೆ ಮೃತರನ್ನು ಪತ್ತೆಹಚ್ಚುವ ಸಲುವಾಗಿ ಇದೀಗ ಡಿಎನ್‌ಎ ಮಾದರಿ ಸಂಗ್ರಹ ಆರಂಭವಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ವಯನಾಡಿನ ಚೂರಲ್‌ಮಲಾ ಮತ್ತು ಮುಂಡಕ್ಕೈನಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಮೃತಪಟ್ಟವರ ದೇಹ ಮತ್ತು ದೇಹದ ಭಾಗಗಳನ್ನು ಗುರುತಿಸಲು ಡಿಎನ್‌ಎ ಮಾದರಿ ಸಂಗ್ರಹವನ್ನು ಪ್ರಾರಂಭಿಸಲಾಗಿದೆ ಎಂದು ಪರಿಶೀಲನಾ ಸಭೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದರು. 'ಇಲ್ಲಿಯವರೆಗೆ 49 ಡಿಎನ್‌ಎ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿದೆ. ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲು ಒಟ್ಟು 149 ಆಂಬ್ಯುಲೆನ್ಸ್‌ಗಳನ್ನು ಏರ್ಪಡಿಸಲಾಗಿದೆ. ಶವಗಳನ್ನು ಸಂಗ್ರಹಿಸಲು 129 ಫ್ರೀಜರ್‌ಗಳು ಲಭ್ಯವಿದೆ' ಎಂದರು.
'ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಇದುವರೆಗೆ 221 ದೇಹಗಳು ಮತ್ತು 166 ಮೃತದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ. 380ಕ್ಕೂ ಹೆಚ್ಚು ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಗಿದೆ' ಎಂದರು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಕಿಡಿಕಾರಿದ ಆರೋಗ್ಯ ಸಚಿವೆ, 'ಖಾಸಗಿ ಆಸ್ಪತ್ರೆಗಳಿಂದ ದತ್ತು ಪಡೆಯಲು ಮಕ್ಕಳ ಲಭ್ಯತೆ ಕುರಿತು ಸುಳ್ಳು ಮಾಹಿತಿ ಹರಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಖಡಕ್ ಎಚ್ಚರಿಕೆ ನೀಡಿದರು.