78 ಸ್ವಾತಂತ್ರ್ಯೋತ್ಸವ: ಕೆಂಪುಕೋಟೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ
'ಲೋಕಲ್ ಫಾರ್ ವೋಕಲ್' ಎಂಬ ಮಂತ್ರವನ್ನು ನಾವು ನೀಡಿದ್ದೇವೆ.
ಸ್ವಾತಂತ್ರ್ಯ ಹೋರಾಟಗಾರರಿಗೆ ದೇಶ ಎಂದು ಚಿರಋಣಿ
'ಸ್ವಾತಂತ್ರ್ಯ ಹೋರಾಟಗಾರರಿಗೆ ದೇಶ ಎಂದು ಚಿರಋಣಿಯಾಗಿದ್ದು, ಅವರ ತ್ಯಾಗ, ಬಲಿದಾನವನ್ನು ಸ್ಮರಿಸುವ ದಿನ ಇದಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
2047ರ ವೇಳೆಗೆ 'ವಿಕಸಿತ ಭಾರತ' ಸಂಕಲ್ಪಕ್ಕೆ ಬದ್ಧ: ಮೋದಿ
'2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ದೇಶವನ್ನಾಗಿ ಮಾಡುವ ನಮ್ಮ ಸಂಕಲ್ಪಕ್ಕೆ ಬದ್ಧರಾಗಿದ್ದೇವೆ. ವಿಕಸಿತ ಭಾರತ ಕೇವಲ ಒಂದು ಪದವಲ್ಲ. 140 ಕೋಟಿ ಭಾರತೀಯರ ಸಂಕಲ್ಪ ಮತ್ತು ಕನಸುಗಳ ಪ್ರತಿಬಿಂಬವಾಗಿದೆ' ಎಂದು ಅವರು ತಿಳಿಸಿದ್ದಾರೆ.
'ವಯನಾಡ್ ಸೇರಿದಂತೆ ನೈಸರ್ಗಿಕ ವಿಕೋಪಗಳ ಕುರಿತು ಉಲ್ಲೇಖ ಮಾಡಿರುವ ಪ್ರಧಾನಿ ಮೋದಿ, ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ' ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣವನ್ನು ಇಲ್ಲಿ ವೀಕ್ಷಿಸಿ...
ಸತತ 11ನೇ ಸಲ ಧ್ವಜಾರೋಹಣ...
ಪ್ರಧಾನಿ ನರೇಂದ್ರ ಮೋದಿ ಅವರು ಸತತ 11ನೇ ಬಾರಿಗೆ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಹಿಂದೆ ಮನಮೋಹನ್ ಸಿಂಗ್ ಅವರು ಸತತ 10 ಬಾರಿ ರಾಷ್ಟ್ರಧ್ವಜಾರೋಹಣ ಮಾಡಿದ್ದರು. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರು 17 ಬಾರಿ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು 16 ಬಾರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದರು.
10 ಕೋಟಿ ಮಹಿಳೆಯರು ಸ್ವಸಹಾಯ ಸಂಘಗಳಿಗೆ ಸೇರ್ಪಡೆ
'ಸುಮಾರು 10 ಕೋಟಿ ಮಹಿಳೆಯರು ಸ್ವಸಹಾಯ ಸಂಘಗಳಿಗೆ ಸೇರ್ಪಡೆಯಾಗಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿರುವುದನ್ನು ನೋಡಿ ನಾವು ಹೆಮ್ಮೆಪಡುತ್ತೇವೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
75,000 ಹೊಸ ವೈದ್ಯಕೀಯ ಸೀಟುಗಳ ಸೃಷ್ಟಿ
ವಿದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಲಕ್ಷ-ಕೋಟಿ ಖರ್ಚು ಮಾಡುತ್ತಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ನಾವು 75,000 ಹೊಸ ವೈದ್ಯಕೀಯ ಸೀಟುಗಳನ್ನು ಸೃಷ್ಟಿಸುತ್ತೇವೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ
ನಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದ್ದೇವೆ. ಹಿಂದಿನ ಹಲವು ನಿರ್ಬಂಧಗಳನ್ನು ತೆರವುಗೊಳಿಸಿದ್ದೇವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ನೂರಾರು ಸ್ಟಾರ್ಟ್‌ಅಪ್‌ಗಳು ಬಂದಿವೆ. ಇದು ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದ್ದಾರೆ.
ಮೂಲಸೌಕರ್ಯ ಹೆಚ್ಚಿಸಲು ಮಹತ್ತರ ಕ್ರಮ: ಮೋದಿ
ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಿಲು ನಾವು ಮಹತ್ತರ ಕ್ರಮ ಕೈಗೊಂಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಾಗರಿಕರಿಂದ ಸಲಹೆ
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಾಗರಿಕರು ಸಲಹೆಗಳನ್ನು ನೀಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮಹಿಳೆಯರ ಮೇಲಿನ ಅಪರಾಧಗಳ ತ್ವರಿತ ತನಿಖೆಯಾಗಬೇಕು. ಇಂತಹ ಹೇಯ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಹೇಳಿದ್ದಾರೆ.
ಹವಾಮಾನ ಗುರಿ ತಲುಪಿದ ಭಾರತ
ಜಿ20 ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ನಿಗಿದಿತ ಅವಧಿಗಿಂತಲೂ ಮುಂಚಿತವಾಗಿ ಹವಾಮಾನ ಗುರಿ ಸಾಧಿಸಿದ ಏಕೈಕ ರಾಷ್ಟ್ರ ಭಾರತ ಆಗಿದೆ ಎಂದು ಪ್ರತಿಪಾದಿಸಿದ್ದಾರೆ.
ಬಾಂಗ್ಲಾ ಅಭಿವೃದ್ಧಿಗೆ ನೆರವು
ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ಎದುರಾಗಿದ್ದು, ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ. ಭಾರತ ಯಾವಾಗಲೂ ಬಾಂಗ್ಲಾದ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.
ದೇಶವು 'ಒಂದು ದೇಶ, ಒಂದು ಚುನಾವಣೆ'ಗೆ ಮುಂದೆ ಬರಬೇಕಿದೆ: ಮೋದಿ
ಪದೇ ಪದೇ ನಡೆಯುತ್ತಿರುವ ಚುನಾವಣೆಗಳು ದೇಶದ ಪ್ರಗತಿಗೆ ಅಡತೆಗಳನ್ನು ಸೃಷ್ಟಿಸುತ್ತಿವೆ. ಎಲ್ಲಾದರೂ ಒಂದು ಕಡೆ ಮೂರರಿಂದ ಆರು ತಿಂಗಳಿಗೊಮ್ಮೆಚುನಾವಣೆ ನಡೆಯುತ್ತಿರುತ್ತವೆ. 'ಒಂದು ದೇಶ, ಒಂದು ಚುನಾವಣೆ' ನನಸಾಗಿಸಲು ನಾವೆಲ್ಲರೂ ಮುಂದೆ ಬರಬೇಕಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.
98 ನಿಮಿಷಗಳ ಸ್ವಾತಂತ್ರ್ಯೋತ್ಸವದ ಭಾಷಣ: ದಾಖಲೆ ಬರೆದ ಪ್ರಧಾನಿ ಮೋದಿ
78ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ವೇಳೆ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ದಾಖಲೆಯ 98 ನಿಮಿಷಗಳ ಕಾಲ ಭಾಷಣ ಮಾಡಿದರು. ಆ ಮೂಲಕ ಸ್ವಾತಂತ್ರ್ಯ ದಿನಾಚರಣೆಯಂದು ಅತಿ ದೀರ್ಘಾವಧಿಯ ಭಾಷಣ ಮಾಡಿದ ಭಾರತದ ಪ್ರಧಾನಿ ಎನಿಸಿದ್ದಾರೆ.
'ಜಾತ್ಯತೀತ ನಾಗರಿಕ ಸಂಹಿತೆ' ಪ್ರತಿಪಾದಿಸಿದ ಪ್ರಧಾನಿ ಮೋದಿ
ನಾವು ಕಳೆದ 75 ವರ್ಷಗಳಿಂದ ಕೋಮು ನಾಗರಿಕ ಸಂಹಿತೆಯಿಂದ ಬದುಕಿದ್ದೇವೆ. ಈಗ ದೇಶವು 'ಜಾತ್ಯತೀತ ನಾಗರಿಕ ಸಂಹಿತೆ'ಯನ್ನು ಹೊಂದುವುದು ಅಗತ್ಯವಾಗಿದೆ. ಆಗ ಮಾತ್ರ ಧರ್ಮ ಆಧಾರಿತ ತಾರತಮ್ಯ ಕೊನೆಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.