ನವದೆಹಲಿ: ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿನ ಉನ್ನತ ಹುದ್ದೆಗಳಿಗೆ ಖಾಸಗಿ ವಲಯದ ಪರಿಣತರು ಹಾಗೂ ತಜ್ಞರನ್ನು 'ಲ್ಯಾಟರಲ್ ಎಂಟ್ರಿ' ಮೂಲಕ ನೇಮಕ ಮಾಡಿಕೊಳ್ಳುವ ಸಂಬಂಧ ಹೊರಡಿಸಿದ್ದ ಜಾಹೀರಾತನ್ನು ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರವು ಮಂಗಳವಾರ ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ಸೂಚಿಸಿದೆ.
ಕೇಂದ್ರ ಸಿಬ್ಬಂದಿ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಈ ಸಂಬಂಧ ಯುಪಿಎಸ್‌ಸಿ ಅಧ್ಯಕ್ಷೆ ಪ್ರೀತಿ ಸೂದನ್ ಅವರಿಗೆ ಪತ್ರ ಬರೆದಿದ್ದು, ಹಿಂದುಳಿದ ಸಮುದಾಯದವರೂ ಸರ್ಕಾರಿ ಉದ್ಯೋಗಗಳಲ್ಲಿ ತಮ್ಮ ಪ್ರಾತಿನಿಧ್ಯ ಪಡೆಯಬೇಕಿರುವುದರಿಂದ 'ಲ್ಯಾಟರಲ್ ಎಂಟ್ರಿ' ನೇಮಕಾತಿ ಪ್ರಕ್ರಿಯೆಯನ್ನು ಕೈಬಿಡುವಂತೆ ಸೂಚಿಸಿದ್ದಾರೆ.
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ 45 ಹುದ್ದೆಗಳಿಗೆ ನೇಮಕಾತಿ ಸಂಬಂಧ ಯುಪಿಎಸ್‌ಸಿ, ಆಗಸ್ಟ್ 17ರಂದು ಜಾಹೀರಾತು ಪ್ರಕಟಿಸಿತ್ತು. ಖಾಸಗಿ ವಲಯದವರೂ ಒಳಗೊಂಡಂತೆ ಪರಿಣತರು ಹಾಗೂ ತಜ್ಞರನ್ನು 'ಲ್ಯಾಟರಲ್ ಎಂಟ್ರಿ' ಮೂಲಕ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿತ್ತು. 10 ಜಂಟಿ ಕಾರ್ಯದರ್ಶಿಗಳು ಮತ್ತು 35 ನಿರ್ದೇಶಕರು/ಉಪ ಕಾರ್ಯದರ್ಶಿ ಹುದ್ದೆಗಳಿಗೆ ಆರ್ಜಿಗಳನ್ನು ಆಹ್ವಾನಿಸಿತ್ತು.
'ಲ್ಯಾಟರಲ್ ಎಂಟ್ರಿ' ನೇಮಕಾತಿಗೆ ಮುಂದಾಗಿರುವ ಸರ್ಕಾರವು ಎಸ್‌ಸಿ,ಎಸ್‌ಟಿ ಹಾಗೂ ಒಬಿಸಿಗಳಿಗಿರುವ ಮೀಸಲಾತಿಯನ್ನು ಬಹಿರಂಗವಾಗಿಯೇ ಕಸಿದುಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.
'ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಎಂಬುದು ಐತಿಹಾಸಿಕ ಅನ್ಯಾಯವನ್ನು ಸರಿಪಡಿಸುವ ಮತ್ತು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಗುರಿಯನ್ನು ಹೊಂದಿದೆ. ಆದರೆ 'ಲ್ಯಾಟರಲ್ ಎಂಟ್ರಿ' ನೇಮಕಾತಿಗಳಲ್ಲಿ ಮೀಸಲಾತಿಗೆ ಯಾವುದೇ ಅವಕಾಶವಿಲ್ಲ. ಪ್ರಧಾನಿ ಅವರು ಸಾಮಾಜಿಕ ನ್ಯಾಯದ ಪರ ಇರುವುದರಿಂದ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು' ಎಂದು ಜಿತೇಂದ್ರ ಸಿಂಗ್ ಅವರು ಪತ್ರದಲ್ಲಿ ಹೇಳಿದ್ದಾರೆ.
'ಆದ್ದರಿಂದ ಆಗಸ್ಟ್ 17ರಂದು ಹೊರಡಿಸಿದ್ದ ಜಾಹೀರಾತನ್ನು ರದ್ದುಗೊಳಿಸುವಂತೆ ಯುಪಿಎಸ್‌ಸಿಯನ್ನು ಕೇಳಿಕೊಳ್ಳುತ್ತೇನೆ' ಎಂದಿದ್ದಾರೆ.