ಢಾಕಾ: ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಮೀಸಲಾತಿ ವಿರೋಧಿ ಪ್ರತಿಭಟನೆಯ ವೇಳೆ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣ ಸಂಬಂಧ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಮತ್ತೊಂದು ಕೊಲೆ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಢಾಕಾದ ಸೂತ್ರಾಪುರ ಪ್ರದೇಶದಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಹತ್ಯೆ ಮಾಡಲಾಗಿತ್ತು.
ಇದರೊಂದಿಗೆ ಹಸೀನಾ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಈ ಪೈಕಿ ಒಂಬತ್ತು ಕೊಲೆ, ಒಂದು ಅಪಹರಣ ಸೇರಿದಂತೆ ನರಮೇಧ ಕುರಿತಾದ ಎರಡು ಪ್ರಕರಣಗಳು ಸೇರಿವೆ.
ಸರ್ಕಾರಿ ಉದ್ಯೋಗಗಳಲ್ಲಿನ ವಿವಾದಾತ್ಮಕ ಮೀಸಲಾತಿ ವ್ಯವಸ್ಥೆ ವಿರುದ್ಧ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಗಳು ತೀವ್ರಗೊಂಡ ಬೆನ್ನಲ್ಲೇ ಆಗಸ್ಟ್ 5ರಂದು 76 ವರ್ಷದ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ದೇಶ ತೊರೆದಿದ್ದರು.
ಜುಲೈ 19ರಂದು ಕೋಬಿ ನಜ್ರುಲ್ ಸರ್ಕಾರಿ ಕಾಲೇಜು ಮತ್ತು ಶಹೀದ್ ಸುಹ್ರವರ್ದಿ ಕಾಲೇಜು ಎದುರು ನೂರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಮತ್ತು ಅವಾಮಿ ಲೀಗ್ ಬೆಂಬಲಿಗರು ಇಬ್ಬರು ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಈಚೆಗೆ ಬಾಂಗ್ಲಾದಾದ್ಯಂತ ನಡೆದ ಹಿಂಸಾಚಾರದ ಘಟನೆಗಳಲ್ಲಿ 230ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಜುಲೈನಿಂದ ವಿದ್ಯಾರ್ಥಿಗಳ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 600 ದಾಟಿದೆ.
ಬಾಂಗ್ಲಾದಲ್ಲಿ ಹಸೀನಾ ಸರ್ಕಾರ ಪತನಗೊಂಡ ಬಳಿಕ 84 ವರ್ಷದ ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ರಚಿಸಲಾಗಿದೆ.