ನವದೆಹಲಿ: ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೊಡಿಯಾ ಹಾಗೂ ಬಿ.ಆರ್.ಎಸ್ ನಾಯಕಿ ಕೆ. ಕವಿತಾ ಅವರ ನ್ಯಾಯಾಂಗ ಬಂಧನವನ್ನು ಆಗಸ್ಟ್ 13ರವರೆಗೆ ವಿಸ್ತರಿಸಿ ಇಲ್ಲಿನ ಕೋರ್ಟ್ ಆದೇಶಿಸಿದೆ.
ವಿಶೇಷ ನ್ಯಾಯಮೂರ್ತಿ ಕಾವೇರಿ ಭವೇಜಾ ಅವರು ಈ ಆದೇಶ ನೀಡಿದ್ದಾರೆ.
ಇದೇ ವೇಳೆ ಸಿಸೋಡಿಯಾ ಹಾಗೂ ಕವಿತಾ ಅವರ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನವನ್ನು ಆಗಸ್ಟ್ 9ರವರೆಗೆ ವಿಸ್ತರಿಸಲಾಗಿದೆ.
ನ್ಯಾಯಾಂಗ ಬಂಧನದ ಅವಧಿ ಮುಗಿಯುವುದಕ್ಕೂ ಮುನ್ನ ಆರೋಪಿಗಳನ್ನು ನ್ಯಾಯಾಯಲಕ್ಕೆ ಹಾಜರುಪಡಿಸಬೇಕು ಎಂದು ನ್ಯಾಯಾಲಯ ಸೂಚಿಸಿತು.
ಈ ಹಿಂದೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಜುಲೈ 31ರವರೆಗೆ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಆಗಸ್ಟ್ 8ರವರೆಗೆ ವಿಸ್ತರಿಸಿತ್ತು.
ಇದೇ ಪ್ರಕರಣದಲ್ಲಿ ಇ.ಡಿ. ದಾಖಲಿಸಿರುವ ಮೊಕದ್ದಮೆ ಸಂಬಂಧ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಸದ್ಯ ಅವರು ಸಿಬಿಐ ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.