ರಾಜೌರಿ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭೂಗತ ಭಯೋತ್ಪಾದಕರ ಅಡಗುದಾಣವನ್ನು ಭದ್ರತಾ ಪಡೆಗಳು ಪತ್ತೆ ಮಾಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜೌರಿ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭೂಗತ ಭಯೋತ್ಪಾದಕರ ಅಡಗುದಾಣವನ್ನು ಭದ್ರತಾ ಪಡೆಗಳು ಪತ್ತೆ ಮಾಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಗ್ರಾವತ್ ಅರಣ್ಯ ಪ್ರದೇಶದ ದರ್ಹಾಲ್ ಪ್ರದೇಶವನ್ನು ಸುತ್ತುವರಿದು ಪೊಲೀಸ್, ಸೇನೆ ಮತ್ತು ಸಿಆರ್‌ಪಿಎಫ್ ಪಡೆ ನಡೆಸಿದ ಜಂಟಿ ಶೋಧ ಕಾರ್ಯಾಚರಣೆ ವೇಳೆ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿರುವ ಭೂಗತ ಅಡಗುದಾಣ ಪತ್ತೆಯಾಗಿದೆ.
ಅಡಗುದಾಣದಲ್ಲಿ ಅಡುಗೆ ಅನಿಲ, ಬ್ಲಾಂಕೆಟ್, ಪಾತ್ರೆ ಸಾಮಾನುಗಳು ಸೇರಿದಂತೆ ದೊಡ್ಡ ಪ್ರಮಾಣದ ದಿನ ಬಳಕೆ ವಸ್ತುಗಳು ಪತ್ತೆಯಾಗಿವೆ. ಅಡಗುದಾಣದಲ್ಲಿ ಯಾರೊಬ್ಬರನ್ನೂ ಬಂಧಿಸಲಾಗಿಲ್ಲ.
ವಿಧ್ವಂಸಕ ಕೃತ್ಯ ಎಸಗಿದ ಬಳಿಕ ಸೇನೆ ಶೋಧ ಕಾರ್ಯಾಚರಣೆ ಆರಂಭಿಸುವ ಹೊತ್ತಿಗೆ ಉಗ್ರರು ಅಡಗುದಾಣ ಸೇರುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಧಮ್‌ಪುರ ಜಿಲ್ಲೆಯ ಬಸಂತಗಢದ ಬಲೋತಾ ಪ್ರದೇಶದಲ್ಲಿ ಗುಹೆ ಮಾದರಿಯ ಅಡಗುದಾಣವೊಂದನ್ನು ಭದ್ರತಾ ಪಡೆ ಪತ್ತೆ ಮಾಡಿದೆ.
ನಿರ್ಜನ ಅಡಗುದಾಣದಲ್ಲಿ ಅಲ್ಪ ಪ್ರಮಾಣದ ಆಹಾರ ಪದಾರ್ಥಗಳು ಪತ್ತೆಯಾಗಿವೆ.
ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿ ಗಸ್ತು ಪಡೆಯ ಮೇಲೆ ಸೋಮವಾರ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಒಬ್ಬರು ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಹುತಾತ್ಮರಾದ ಬಳಿಕ ಬಸಂತ ಗಢದಲ್ಲಿ ಸೇನೆ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.