ಬೀಜಿಂಗ್: ಮ್ಯಾನ್ಮಾರ್ ಸೇನೆ ಮತ್ತು ಅಲ್ಲಿನ ಬಂಡುಕೋರ ಗುಂಪುಗಳ ಮಧ್ಯೆ ನಡೆಯುತ್ತಿರುವ ಶಸ್ತ್ರಸಜ್ಜಿತ ಹೋರಾಟ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮ್ಯಾನ್ಮಾರ್ ಗಡಿಯಲ್ಲಿ ಸೇನಾ ತುಕಡಿಗಳ ನಿಯೋಜನೆ ಮತ್ತು ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ ಎಂದು ಚೀನಾದ ಮಿಲಿಟರಿ ತಿಳಿಸಿದೆ.
ರುಯಿಲಿ, ಝೆಂಕಾಂಗ್ ಸೇರಿದಂತೆ ಇತರೆ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ ಎಂದು ಚೀನಾದ ಮಿಲಿಟರಿ ಪ್ರಕಟಣೆಯಲ್ಲಿ ತಿಳಿಸಿದೆ.
ಮ್ಯಾನ್ಮಾರ್ ಸೇನೆ ಮತ್ತು ಅಲ್ಲಿನ ಬಂಡುಕೋರರ ನಡುವಿನ ಹೋರಾಟದ ಪರಿಣಾಮವಾಗಿ ಶೆಲ್ ದಾಳಿ ನಡೆಸಲಾಗುತ್ತಿದೆ. ಇದರಿಂದಾಗಿ ಸ್ಥಳೀಯರು ಗಾಯಗೊಂಡಿದ್ದಾರೆ. ಜತೆಗೆ, ದಾಳಿಯಿಂದ ಚೀನಾದ ಭೂಪ್ರದೇಶದ ಗಡಿ ರೇಖೆಗೆ ಹಾನಿಯಾಗಿರುವುದರಿಂದ ಮ್ಯಾನ್ಮಾರ್ ಗಡಿಯಲ್ಲಿ ಹೆಚ್ಚಿನ ಸಮರಾಭ್ಯಾಸ ನಡೆಸಲು ನಿರ್ಧರಿಸಲಾಗಿದೆ ಎಂದು ಚೀನಾ ಹೇಳಿದೆ.
ಮ್ಯಾನ್ಮಾರ್‌ನ ಆಂತರಿಕ ಸಂಘರ್ಷದಿಂದ ಚೀನಾ-ಮ್ಯಾನ್ಮಾರ್ ಗಡಿಯಲ್ಲಿನ ಸ್ಥಿರತೆ ಮತ್ತು ಸಾಮಾಜಿಕ ವ್ಯವಸ್ಥೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಹಾಗಾಗಿ ಗಡಿ ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆ ಕಾಪಾಡಿಕೊಳ್ಳುವುದು ಅನಿವಾರ್ಯ ಎಂದೂ ಚೀನಾ ತಿಳಿಸಿದೆ.
ಮ್ಯಾನ್ಮಾರ್‌ನಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಲು ಚೀನಾ ತನ್ನ ಬದ್ಧತೆಯನ್ನು ಮುಂದುವರಿಸುತ್ತದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಇತ್ತೀಚೆಗೆ ಹೇಳಿದ್ದರು.