HEALTH TIPS

ಬಾಂಗ್ಲಾ ನಾಶ ಮಾಡಿದ ಹಸೀನಾ: ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಕಿಡಿ

 ಢಾಕಾ: 'ಅಧಿಕಾರದಲ್ಲಿ ಉಳಿಯುವ ಪ್ರಯತ್ನದಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ದೇಶದ ಪ್ರತಿಯೊಂದು ಸಂಸ್ಥೆಯನ್ನು ನಾಶಪಡಿಸಿದ್ದಾರೆ' ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಭಾನುವಾರ ಆರೋಪಿಸಿದ್ದಾರೆ.

ಪ್ರಮುಖ ಸುಧಾರಣೆಗಳನ್ನು ಜಾರಿಗೊಳಿಸಿದ ಬಳಿಕ, ಮುಕ್ತ, ನ್ಯಾಯಸಮ್ಮತ ಹಾಗೂ ಎಲ್ಲರೂ ಭಾಗಿಯಾಗುವ ರೀತಿ ಚುನಾವಣೆ ನಡೆಸುವುದಾಗಿಯೂ ಇದೇ ಸಂದರ್ಭದಲ್ಲಿ ಅವರು ದೇಶದ ಜನರಿಗೆ ಭರವಸೆ ನೀಡಿದ್ದಾರೆ.

'ಶೇಖ್ ಹಸೀನಾ ಅವರ ಸರ್ವಾಧಿಕಾರದ ಆಡಳಿತವು ಅಧಿಕಾರ ಉಳಿಸಿಕೊಳ್ಳಲಿಕ್ಕಾಗಿ ದೇಶದ ಪ್ರತಿಯೊಂದು ಸಂಸ್ಥೆಯನ್ನು ನಾಶಗೊಳಿಸಿದೆ. ನ್ಯಾಯಾಂಗ ವ್ಯವಸ್ಥೆ ಸಹ ಮುರಿದುಬಿದ್ದಿದೆ. ಒಂದೂವರೆ ದಶಕದ ಕ್ರೂರ ದಬ್ಬಾಳಿಕೆಯ ಮೂಲಕ ಪ್ರಜಾಪ್ರಭುತ್ವದ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ' ಎಂದು ಯೂನಸ್ ಹೇಳಿದ್ದಾರೆ ಎಂಬುದಾಗಿ ಅವರ ಪತ್ರಿಕಾ ಕಾರ್ಯದರ್ಶಿ ಶಫೀಕುಲ್‌ ಆಲಂ ಹೇಳಿಕೆ ಉಲ್ಲೇಖಿಸಿ ಯುನೈಟೆಡ್‌ ನ್ಯೂಸ್‌ ಆಫ್‌ ಬಾಂಗ್ಲಾದೇಶ ವರದಿ ಮಾಡಿದೆ.

ಮಧ್ಯಂತರ ಸರ್ಕಾರವು ಕಾರ್ಯಾರಂಭಿಸಿದ ಬಳಿಕ ಢಾಕಾದಲ್ಲಿ ನೆಲೆಸಿರುವ ರಾಜತಾಂತ್ರಿಕರಿಗೆ ವಿವರಣೆ ನೀಡಿದ ಯೂನಸ್, ಸಂಪೂರ್ಣ ಅವ್ಯವಸ್ಥೆಯಾಗಿದ್ದ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದೇನೆ ಎಂದಿದ್ದಾರೆ.

ಚುನಾವಣಾ ಆಯೋಗ, ನ್ಯಾಯಾಂಗ, ನಾಗರಿಕ ಆಡಳಿತ, ಭದ್ರತಾ ಪಡೆಗಳು ಮತ್ತು ಮಾಧ್ಯಮದಲ್ಲೂ ಅಗತ್ಯ ಸುಧಾರಣೆಗಳನ್ನು ತರಬೇಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

'ರಾಜಕೀಯ ಪ್ರೋತ್ಸಾಹದಿಂದ ಬ್ಯಾಂಕ್‌ಗಳನ್ನು ಲೂಟಿ ಮಾಡಿದ್ದು, ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ದೇಶದ ಬೊಕ್ಕಸವನ್ನು ಕೊಳ್ಳೆ ಹೊಡೆಯಲಾಗಿದೆ' ಎಂದು ದೂರಿದ್ದಾರೆ.

'ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಣಕ್ಕೆ ತರುವುದು ಮಧ್ಯಂತರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಉತ್ತಮ ಆಡಳಿತ ನೀಡುವುದರ ಜೊತೆಗೆ ಭ್ರಷ್ಟಾಚಾರ ರಹಿತ ಆಡಳಿತಕ್ಕೂ ಒತ್ತು ನೀಡಲಾಗುವುದು' ಎಂದಿದ್ದಾರೆ.

'ನಮ್ಮ ಸರ್ಕಾರವು ದೇಶದ ಎಲ್ಲ ಧಾರ್ಮಿಕ ಮತ್ತು ಜನಾಂಗೀಯ ಗುಂಪುಗಳಿಗೆ ರಕ್ಷಣೆ ನೀಡಲಿದೆ. ಭದ್ರತೆಯನ್ನು ಒದಗಿಸುವ ಪ್ರತಿಜ್ಞೆಗೆ ಬದ್ಧವಾಗಿದೆ' ಎಂದೂ ಯೂನಸ್ ಹೇಳಿದ್ದಾರೆ.

ಸರ್ಕಾರಿ ಉದ್ಯೋಗದಲ್ಲಿ ವಿವಾದಾತ್ಮಕ ಮೀಸಲು ವ್ಯವಸ್ಥೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ ಬೃಹತ್ ಚಳವಳಿಯು ಹಿಂಸಾಚಾರಕ್ಕೆ ತಿರುಗಿದ್ದರಿಂದ ಶೇಖ್‌ ಹಸೀನಾ ಆ.5ರಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪರಾರಿಯಾಗಿದ್ದಾರೆ.

ಹಸೀನಾ ಪದಚ್ಯುತಿಯ ನಂತರ ಮೊಹಮ್ಮದ್ ಯೂನಸ್ ಆ.8ರಂದು ಬಾಂಗ್ಲಾದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries