ಕೊಚ್ಚಿ: ವಯನಾಡ್‌ನ ಭೂಕುಸಿತ ಸಂತ್ರಸ್ತರಿಗೆ ನೆರವಾಗಲು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಎಲ್ಲ ಶಾಸಕರು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಿದ್ದಾರೆ.
ಭೂಕುಸಿತ ಬಾಧಿತ ಪ್ರದೇಶಗಳಲ್ಲಿ ರಕ್ಷಣೆ, ಸಂತ್ರಸ್ತರಿಗೆ ನೆರವು ನೀಡಲು ಮೈತ್ರಿಕೂಟವು ಸರ್ಕಾರಕ್ಕೆ ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಕಟಿಸಿರುವ 100 ಮನೆಗಳ ನಿರ್ಮಾಣ ಹೊರತುಪಡಿಸಿ, ಮೈತ್ರಿ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೂಡ ಪರಿಹಾರದ ನೆರವು ಪ್ರಕಟಿಸಿದೆ.
ಇದಕ್ಕೂ ಮೊದಲು ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟವು ವಿಧಾನಸಭೆ ಮತ್ತು ಸಂಸತ್ತಿನಲ್ಲಿರುವ ಮೈತ್ರಿಕೂಟದ ಸದಸ್ಯರು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡುವರು ಎಂದು ಪ್ರಕಟಿಸಿತ್ತು.
ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಿಂಗಳ ವೇತನವನ್ನು ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದರು. ಕೆಪಿಸಿಸಿ ಮುಖ್ಯಸ್ಥ ಕೆ.ಸುದರ್ಶನ್ ಅವರು ಇದಕ್ಕೆ ಆಕ್ಷೇಪಿಸಿದ್ದು, ಸಿಪಿಎಂ ನೇತೃತ್ವದ ಸರ್ಕಾರ ನಿರ್ವಹಿಸುತ್ತಿರುವ ನಿಧಿಗೆ ದೇಣಿಗೆ ನೀಡುವ ಅಗತ್ಯವಿಲ್ಲ ಎಂದಿದ್ದರು.
ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಸತೀಶನ್ ಅವರು, ನೆಲೆ ಕಳೆದುಕೊಂಡವರು ಹಾಗೂ ಅನಾಥರಾಗಿರುವವರಿಗೆ ನೆರವು ಒದಗಿಸಲು ಮೊದಲ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಭವಿಷ್ಯದಲ್ಲಿ ಇಂತಹ ಅನಾಹುತ ತಡೆಗೆ ಮುನ್ನೆಚ್ಚರಿಕೆ ವಹಿಸಬೇಕು. ಭೂಕುಸಿತ ಪ್ರದೇಶ ಬಾಧಿತ ವಲಯದಲ್ಲಿ ಎಚ್ಚರಿಕೆ ವಹಿಸಬೇಕು. ಕೊಚ್ಚಿನ್ ವಿಶ್ವವಿದ್ಯಾಲಯದ ಪರಿಣತರ ನೆರವು ಪಡೆಯಬೇಕು. ಜಗತ್ತಿನ ವಿವಿಧೆಡೆ ಲಭ್ಯವಿರುವ ಎಲ್ಲ ತಾಂತ್ರಿಕ ಪರಿಣತಿಯ ಬಳಕೆ ಆಗಬೇಕು ಎಂದು ಸಲಹೆ ನೀಡಿದರು.
ಪ್ರಾಕೃತಿಕ ವಿಕೋಪ ಕುರಿತು ಮುನ್ನೆಚ್ಚರಿಕೆ ನೀಡುವ, ಕಡಿಮೆ ಅವಧಿಯಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ವ್ಯವಸ್ಥೆ ಅಗಬೇಕು. ತಾಪಮಾನ ಬದಲಾವಣೆಗೆ ಅನುಗುಣವಾಗಿ ನೀತಿ ರಚನೆ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಅಗತ್ಯ ಸಲಹೆ ನೀಡಲು ಸಿದ್ಧ ಎಂದು ಹೇಳಿದರು.