ಸಾವೊ ಪೌಲೊ: ಬ್ರೆಜಿಲ್ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ದುರಂತದ ಭೀಕರತೆಯನ್ನು ಎತ್ತಿ ತೋರಿಸಿವೆ.
ಕಸ್ಕಾವೇಲ್ ನಗರದಿಂದ ಸಾವೊ ಪೌಲೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ Voepass ಏರ್ಲೈನ್ಸ್ನ ATR-72 ವಿಮಾನ ವಿನೆದೊ ನಗರದ ಜನವಸತಿ ಪ್ರದೇಶದಲ್ಲಿ ಶುಕ್ರವಾರ ಪತನಗೊಂಡಿದೆ.
ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನ ನೇರವಾಗಿ ಚಲಿಸದೇ ಆಕಾಶದಲ್ಲೇ ಗಿರಕಿ ಹೊಡೆಯುತ್ತಾ ವೇಗವಾಗಿ ನೆಲಕ್ಕೆ ಅಪ್ಪಳಿಸಿದೆ. ಈ ಆತಂಕಕಾರಿ ವಿಡಿಯೊ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ವೊಪಾಸ್ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನದಲ್ಲಿ 57 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯಿದ್ದರು. ದುರಂತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ವಸತಿ ಪ್ರದೇಶದಲ್ಲಿ ಬಿದ್ದರೂ ನಾಗರಿಕರ ಸಾವು-ನೋವಾಗಿಲ್ಲ. ಒಂದು ವಸತಿ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದ ಪೈಲಟ್ ವಿಮಾನ ಮನೆಗಳ ಮೇಲೆ ಬೀಳುವುದನ್ನು ಬಹುತೇಕ ತಪ್ಪಿಸಿದ್ದಾರೆ ಎಂದು ಪ್ರಾಥಮಿಕವಾಗಿ ಕಂಡು ಬಂದಿದೆ ಎಂದು ಹೇಳಿದ್ದಾರೆ.
ಗಿರಕಿ ಹೊಡೆಯುತ್ತಾ ಪತನವಾದ ಬ್ರೆಜಿಲ್ನ ಈ ವಿಮಾನ ಪತನ ಪ್ರಪಂಚದ ವಿಮಾನಯಾನ ತಜ್ಞರಿಗೆ ಆಶ್ಚರ್ಯ ತರಿಸಿದೆ. ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಹವಾಮಾನ ವೈಪರಿತ್ಯದಿಂದ ಪೈಲಟ್ ಎಂಜಿನ್ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಿರಬಹುದು ಎಂದು ಶಂಕಿಸಲಾಗಿದೆ.
Voepass ಏರ್ಲೈನ್ಸ್ ಬ್ರೆಜಿಲ್ನ ನಾಲ್ಕನೇ ಅತಿದೊಡ್ಡ ನಾಗರಿಕ ವಿಮಾನಯಾನ ಸಂಸ್ಥೆಯಾಗಿದೆ.