ನವದೆಹಲಿ: ಹೊಸ ಸಂಸತ್ ಭವನ ಕಟ್ಟಡದ ವಿನ್ಯಾಸ, ನಿರ್ಮಾಣ ಮತ್ತು ಸೌಲಭ್ಯಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಲೋಕಸಭೆಯ ಕಾಂಗ್ರೆಸ್‌ನ ಉಪನಾಯಕ ಗೌರವ್ ಗೊಗೊಯ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ಹೊಸ ಸಂಸತ್ ಭವನದ ವಿನ್ಯಾಸ, ನಿರ್ಮಾಣ ಮತ್ತು ಸೌಲಭ್ಯಗಳನ್ನು ಪರಿಶೀಲಿಸುವ ಅಗತ್ಯವಿದೆ. ಭಾರತೀಯ ಸಂಸದೀಯ ಪ್ರಜಾಪ್ರಭುತ್ವದ ಶ್ರೇಷ್ಠ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಹೊಸ ಸಂಸತ್ ಭವನದ ಕಟ್ಟಡಕ್ಕೆ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ' ಎಂದು ಹೇಳಿದ್ದಾರೆ.
'ಸಂಸತ್ ದೇಶದ ಜನತೆಗೆ ಸೇರಿದೆ. ಯಾವುದೇ ಪಕ್ಷ ಅಥವಾ ಒಬ್ಬ ವ್ಯಕ್ತಿಗೆ ಸೇರಿರುವುದಲ್ಲ. ಈ ಕುರಿತು ಎಲ್ಲಾ ಪ್ರಮುಖ ಪಕ್ಷಗಳ ಅಭಿಪ್ರಾಯಗಳನ್ನು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳಲಾಗುವುದು' ಎಂದು ಗೊಗೊಯ್ ಹೇಳಿದ್ದಾರೆ.
ಸಂಸತ್ ಭವನದೊಳಗೆ ಮಳೆ ನೀರು ಸೋರಿಕೆಯಾಗುವ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಸಂಸದ ಮಣಿಕಂ ಟಾಗೋರ್, 'ಹೊರಗಡೆ ಪೇಪರ್ ಸೋರಿಕೆ. ಒಳಗಡೆ ನೀರು ಸೋರಿಕೆ' ಎಂದು ಟೀಕಿಸಿದ್ದಾರೆ.
'ಸಂಸತ್ತಿನ ಲಾಬಿಯಲ್ಲಿ ನೀರು ಸೋರಿಕೆಯಾಗುತ್ತಿರುವುದು ಹೊಸ ಕಟ್ಟಡದಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವದ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ' ಎಂದು ಅವರು ಬರೆದುಕೊಂಡಿದ್ದಾರೆ.
ಹೊಸ ಸಂಸತ್‌ಗಿಂತ ಹಳೆಯ ಸಂಸತ್ ಒಳ್ಳೆಯದಿತ್ತು ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.