ಜೈಪುರ: ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗೆ ಚಾಕುವಿನಿಂದ ಇರಿದಿರುವ ಘಟನೆಯು ಕೋಮು ಗಲಭೆಗೆ ಕಾರಣವಾಗಿರುವುದರಿಂದ ಉದಯಪುರದ ಹಲವು ಭಾಗಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಕಡಿತಗೊಳಿಸಲಾಗಿತ್ತು ಮತ್ತು ಎಲ್ಲ ಶಾಲೆಗಳನ್ನು ಮುಚ್ಚಲಾಗಿದೆ.
ಜೈಪುರ: ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗೆ ಚಾಕುವಿನಿಂದ ಇರಿದಿರುವ ಘಟನೆಯು ಕೋಮು ಗಲಭೆಗೆ ಕಾರಣವಾಗಿರುವುದರಿಂದ ಉದಯಪುರದ ಹಲವು ಭಾಗಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಕಡಿತಗೊಳಿಸಲಾಗಿತ್ತು ಮತ್ತು ಎಲ್ಲ ಶಾಲೆಗಳನ್ನು ಮುಚ್ಚಲಾಗಿದೆ.
ರಾಜಸ್ಥಾನದ ಉದಯಪುರದಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಶುಕ್ರವಾರ ತನ್ನ ಸಹಪಾಠಿಗೆ ಚಾಕುವಿನಿಂದ ಇರಿದಿದ್ದ.
'ಗಾಯಗೊಂಡಿರುವ ವಿದ್ಯಾರ್ಥಿಯು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಾಳಿ ಮಾಡಿರುವ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದೆ. ವಿದ್ಯಾರ್ಥಿಗಳಿಬ್ಬರು ಅಪ್ರಾಪ್ತರು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ಆದೇಶದವರೆಗೆ ಉದಯಪುರದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ತೆರೆಯದಂತೆ ಜಿಲ್ಲಾಧಿಕಾರಿ ಅರವಿಂದ್ ಪೊಸ್ವಾಲ್ ಅವರು ಆದೇಶಿಸಿದ್ದು, ಘಟನೆಯ ಬಗ್ಗೆ ಊಹಪೋಹಗಳನ್ನು ನಂಬದಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಉದಯಪುರ ನಗರ, ಬೆದ್ಲಾ, ಬಡಗಾವ್, ಬ್ಲೀಚಾ, ದೇಬಾರಿ, ಏಕಲಿಂಗಾಪುರ, ಕಾನ್ಪುರ, ಧಿಕಾಲಿ ಮತ್ತು ಭುವನ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದ ಶನಿವಾರ ರಾತ್ರಿ 10 ಗಂಟೆಯವರೆಗೆ ಇಂಟರ್‌ನೆಟ್ ಸೇವೆಯನ್ನು ಕಡಿತಗೊಳಿಸಲು ವಿಭಾಗೀಯ ಕಮಿಷನರ್ ರಾಜೇಂದ್ರ ಭಟ್ ಅವರು ಆದೇಶಿಸಿದ್ದಾರೆ.
'ನಗರದಲ್ಲಿ ಜನರು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಧುಬನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.