ಸೋಲ್: ಇಸ್ರೇಲ್ ಮತ್ತು ಹಮಾಸ್, ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿರುವ ಬೆನ್ನಲ್ಲೇ ಉತ್ತರ ಕೊರಿಯಾವು ತನ್ನ ಮತ್ತೊಂದು ಅಸ್ತ್ರದ ಪರೀಕ್ಷೆ ಮೂಲಕ ಆತಂಕ ಮೂಡಿಸಿದೆ.
ಉತ್ತರ ಕೊರಿಯಾವು ಸೋಮವಾರ ಅತ್ಯಾಧುನಿಕ ಸೂಸೈಡ್ ಡ್ರೋನ್‌ಗಳ ಪರೀಕ್ಷೆ ನಡೆಸಿದೆ.
ಆಕರ್ಷಕ ಟೋಪಿ ಹಾಕಿಕೊಂಡು, ಅತ್ಯಾಧುನಿಕ ಬೈನಾಕ್ಯುಲರ್ ಹಿಡಿದು ಡ್ರೋನ್ ಗುರಿ ಬೇಧಿಸುವುದನ್ನು ಕಿಮ್ ವೀಕ್ಷಿಸಿದರು ಎಂದು ವರದಿ ತಿಳಿಸಿದೆ.
ಕಾರ್ಯತಂತ್ರದ ವಿಚಕ್ಷಣ ಮತ್ತು ಬಹುಪಯೋಗಿ ಡ್ರೋನ್‌ಗಳ ಜೊತೆಗೆ'ಮತ್ತಷ್ಟು ಸೂಸೈಡ್ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸುವುದು ಅತ್ಯಂತ ಅವಶ್ಯಕ'ಎಂದು ಕಿಮ್ ಜಾಂಗ್ ಉನ್ ಹೇಳಿರುವುದಾಗಿ ಕೋರಿಯಾದ ಕೇಂದ್ರೀಯ ಸುದ್ದಿ ಸಂಸ್ಥೆ(ಕಿಸಿಎನ್‌ಎ) ಹೇಳಿದೆ.
ಶತ್ರುಗಳನ್ನು ಹೊಡೆದುರುಳಿಸುವ ಉದ್ದೇಶದಿಂದ ಮಾನವ ರಹಿತ ಸ್ಫೋಟಕ ಕೊಂಡೊಯ್ಯಬಲ್ಲ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಅಣ್ವಸ್ತ್ರಗಳ ಬಲ ಹೊಂದಿರುವ ಉತ್ತರ ಕೊರಿಯಾ, ಭೂಪ್ರದೇಶ ಮತ್ತು ಸಮುದ್ರ ವಲಯದಲ್ಲಿ ಯಾವುದೇ ಶತ್ರುಗಳನ್ನು ಹೊಡೆದುರುಳಿಸಲು ಶಕ್ತಿಶಾಲಿ ಡ್ರೋನ್‌ಗಳ ಸಂಗ್ರಹದಲ್ಲಿ ತೊಡಗಿದೆ ಎಂದು ಕೆಸಿಎನ್‌ಎ ವರದಿ ಮಾಡಿದೆ.
ಆಗಸ್ಟ್ 24ರಂದು ಉತ್ತರ ಕೊರಿಯಾ ಡ್ರೋನ್‌ಗಳ ಪರೀಕ್ಷೆ ನಡೆಸಿದ್ದು,'ವಿವಿಧ ಮಾರ್ಗಗಳಿಂದ ಉಡಾವಣೆ ಬಳಿಕವೂ ಡ್ರೋನ್‌ಗಳು ನಿಗದಿತ ಗುರಿಯನ್ನು ಪತ್ತೆ ಮಾಡಿ ಬೇಧಿಸಿವೆ'ಎಂದೂ ಅದು ತಿಳಿಸಿದೆ.
ಡ್ರೋನ್ ಅಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆ ಬಳಸುವಲ್ಲಿಯೂ ನಮ್ಮ ದೇಶ ಸಕ್ರಿಯವಾಗಿ ತೊಡಗಲಿದೆ ಎಂದೂ ಕಿಮ್ ತಿಳಿಸಿದ್ದಾರೆ.
ಸರ್ಕಾರಿ ಮಾಧ್ಯಮಗಳು ಬಿಡುಗಡೆ ಮಾಡಿರುವ ಉತ್ತರ ಕೊರಿಯಾದ ಸೂಸೈಡ್ ಡ್ರೋನ್‌ಗಳ ಚಿತ್ರಗಳನ್ನು ಗಮನಿಸಿದರೆ, ಅವುಗಳು ಇಸ್ರೇಲ್ ಅಭಿವೃದ್ಧಿಪಡಿಸಿರುವ 'ಎಚ್‌ಎಆರ್‌ಒಪಿ'ಸೂಸೈಡ್ ಡ್ರೋನ್‌ಗಳನ್ನು ಹೋಲುತ್ತವೆ ಎಂದು ಪರಿಣಿತರು ತಿಳಿಸಿದ್ಧಾರೆ. ಈ ತಂತ್ರಜ್ಞಾನವನ್ನು ರಷ್ಯಾದಿಂದ ಪಡೆದಿರಬಹುದು ಎಂದೂ ಅವರು ಹೇಳಿದ್ದಾರೆ.