ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿ ಕುಟುಂಬ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಯ್ಯದ್ ಹಮೀದ್ ಸುಹಾಯಿಬ್ ಇವರನ್ನು ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಸಮಿತಿ ವತಿಯಿಂದ ಬೀಳ್ಕೊಡಲಾಯಿತು. ಕಳೆದ 7ವರ್ಷಗಳಿಂದ ಕುಂಬ್ಡಾಜೆ ಕುಟುಂಬ ಅರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಸಾರ್ವಜನಿಕರ ಹೃದಯದಲ್ಲಿ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ತನ್ಮೂಲಕ ಜನತೆಯ ನೆಚ್ಚಿನ ವೈದ್ಯರಾಗಿದ್ದ ಅವರ ಸರಳ ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಕುಂಬ್ಡಾಜೆಯ ಜನತೆ ಮನಸೋತಿದ್ದರು. ಇದೀಗ ಕರ್ತವ್ಯ ನಿಮಿತ್ತ ವರ್ಗಾವಣೆಗೊಂಡು ಪುತ್ತಿಗೆ ಗ್ರಾಮ ಪಂಚಾಯಿತಿ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ತೆರಳುವ ಸಂದರ್ಭದಲ್ಲಿ ಪಕ್ಷದ ವತಿಯಿಂದ ಅಭಿನಂದಿಸಲಾಯಿತು.
ಬಿಜೆಪಿ ಬದಿಯಡ್ಕ ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ಅಧ್ಯಕ್ಷತೆ ವಹಿಸಿದ್ದರು. ಕುಂಬ್ಡಾಜೆ ಗ್ರಾಮ ಪಂಚಾಯಿತಿ ಸದಸ್ಯೆ ಮೀನಾಕ್ಷಿ ಸುಧಾಕರ್, ಎಸ್ ಸಿ ಮೋರ್ಚಾ ಬದಿಯಡ್ಕ ಮಂಡಲ ಅಧ್ಯಕ್ಷ ಸುರೇಶ್ ಬಿಕೆ, ರಾಘವೇಂದ್ರ ಮೈಲ್ತ್ತೊಟ್ಟಿ ಉಪಸ್ಥಿತರಿದ್ದರು. ಶಶಿಧರ ತೆಕ್ಕೆಮೂಲೆ ಸ್ವಾಗತಿಸಿ, ಸಾಮಾಜಿಕ ಕಾರ್ಯಕರ್ತ ರಮೇಶ್ ಕೃಷ್ಣ ಪದ್ಮಾರು ವಂದಿಸಿದರು.