ತಿರುವನಂತಪುರಂ: ಖಾದಿಯು ಕೈಗಾರಿಕಾ ಉತ್ಪನ್ನ ಮಾತ್ರವಲ್ಲದೆ ಸಾಂಸ್ಕೃತಿಕ ಮತ್ತು ರಾಜಕೀಯ ಮಹತ್ವವನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಅವರು ಅಯ್ಯಂಗಾಳಿ ಸಭಾಂಗಣದಲ್ಲಿ ಕೆಎಸ್‍ಎಫ್‍ಇ ವತಿಯಿಂದ ನಡೆಯುತ್ತಿರುವ ಗ್ಯಾಲಕ್ಸಿ ಚಿಟ್ಟಿಗಳ ಶಾಖೆ ಮಟ್ಟದ ಓಣಕೊಡಿ ಬಹುಮಾನ ವಿತರಣೆ ಹಾಗೂ ಓಣಂ ಖಾದಿ ಮೇಳದ ರಾಜ್ಯಮಟ್ಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೇರಳೀಯರು ಅಂದು ಹಾಡಿದ್ದು, ‘ನೂರು ದಾರದಿಂದ ನೇಯ್ದ ಬಟ್ಟೆಯಿಂದ ಅನ್ಯಾಯದ ಮುಚ್ಚುಮರೆ ಮಾಡಿದೆವು’ ಎಂದು. ಆದ್ದರಿಂದ, ಖಾದಿಗೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದೊಂದಿಗೆ ಅವಿನಾಭಾವ ಸಂಬಂಧವಿದೆ. ಪರಕೀಯರ ಆಳ್ವಿಕೆಯಿಂದ ಮುಕ್ತಿ ಪಡೆಯಲು ನಮ್ಮ ದೇಶದ ಹೋರಾಟಗಳಲ್ಲಿ ಖಾದಿ ಅಸ್ತ್ರವಾಗಿ ಬಳಕೆಯಾದ ಉತ್ಪನ್ನ.
ಖಾದಿ ಮಂಡಳಿಯ ಅಡಿಯಲ್ಲಿ ಸಹಕಾರ ಸಂಘಗಳ ಪುನಶ್ಚೇತನದ ಭಾಗವಾಗಿ 48 ಸಂಘಗಳಲ್ಲಿ ಆಡಳಿತ ಮಂಡಳಿಗಳನ್ನು ರಚಿಸಲಾಗಿದೆ. 93 ಗುಂಪುಗಳ ಪುನರ್ವಸತಿಗೆ ಕ್ರಮಕೈಗೊಳ್ಳಲಾಗುತ್ತಿದೆ. ವಾಣಿಜ್ಯೋದ್ಯಮ ಅಭಿವೃದ್ಧಿ ಯೋಜನೆಗಳ ಭಾಗವಾಗಿ 2,214 ಖಾದಿ ಘಟಕಗಳನ್ನು ಆರಂಭಿಸಲಾಗಿದೆ. ಈ ಮೂಲಕ ಸುಮಾರು 12,000 ಉದ್ಯೋಗ ಸೃಷ್ಟಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಸ್‍ಎಫ್‍ಇ ಅಧ್ಯಕ್ಷ ಕೆ. ವರದರಾಜನ್, ಖಾದಿ ಮಂಡಳಿ ಉಪಾಧ್ಯಕ್ಷ ಪಿ. ಜಯರಾಜನ್, ವ್ಯವಸ್ಥಾಪಕ ನಿರ್ದೇಶಕ ಡಾ. ಸನಿಲ್ ಎಸ್ ಕೆ ಮತ್ತು ಇತರರು ಮಾತನಾಡಿದರು.
ವಯನಾಡು ದುರಂತದ ಸಂತ್ರಸ್ತರಿಗೆ ಖಾದಿ ಮಂಡಳಿಯಿಂದ 10 ಲಕ್ಷ ರೂ ಧನಸಹಾಯವನ್ನು ಜಯರಾಜನ್ ಮುಖ್ಯಮಂತ್ರಿಗೆ ಹಸ್ತಾಂತರಿಸಿದರು. ವಿವಿಧ ಖಾದಿ ಸಂಘಟನೆಗಳು ಮುಖ್ಯಮಂತ್ರಿಗಳಿಗೆ ಪರಿಹಾರ ನಿಧಿಗೆ ಈ ಸಂದರ್ಭ ದೇಣಿಗೆಯನ್ನು ಹಸ್ತಾಂತರಿಸಿದವು.