ಕೊಲಂಬೊ: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಗೆ ಅಲ್ಲಿನ ತಮಿಳು ಪಕ್ಷಗಳ ಸಮೂಹವು ಪಾಕಿಯಾಸೆಲ್ವಂ ಅರಿಯನೇತ್ರನ್ ಅವರನ್ನು ತಮ್ಮ ಒಮ್ಮತದ ಅಭ್ಯರ್ಥಿಯಾಗಿ ಗುರುವಾರ ಘೋಷಿಸಿವೆ.
ದೇಶದ ಪ್ರಮುಖ ತಮಿಳು ಪಕ್ಷವಾದ ಐಟಿಎಕೆ ಇದಕ್ಕೆ ಬೆಂಬಲ ವ್ಯಕ್ತಪಡಿಸಿಲ್ಲ. ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆ ಸೆಪ್ಟೆಂಬರ್ 21ರಂದು ಜರುಗಲಿದೆ.
ದೇಶದ ಉತ್ತರ ಮತ್ತು ಪೂರ್ವ ಭಾಗದ ತಮಿಳು ಪಕ್ಷಗಳಾದ ಟಿಇಎಲ್‌ಒ, ಪಿಎಲ್‌ಒಟಿಇ, ಟಿಪಿಎ, ಟಿಎನ್‌ಪಿ ಮತ್ತು ಇಪಿಆರ್‌ಎಲ್‌ಎಫ್‌ಗಳ ನಾಯಕರು 'ತಮಿಳು ಪೀಪಲ್ಸ್ ಕಾಂಗ್ರೆಸ್ ಅಸೋಸಿಯೇಷನ್' ಎಂಬ ನಾಗರಿಕ ಗುಂಪಿನೊಂದಿಗೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಜುಲೈನಲ್ಲಿ ಒಪ್ಪಂದಕ್ಕೆ ಸಹಿ ಮಾಡಿದ್ದರು. ಆದರೆ ಐಟಿಎಕೆ ಈ ಒಪ್ಪಂದಕ್ಕೆ ಸಹಿ ಮಾಡಿಲ್ಲ.
ಮಾಜಿ ಸಂಸದರಾಗಿರುವ ಪಾಕಿಯಾಸೆಲ್ವಂ (69) ಅವರನ್ನು ಜಾಫ್ನಾ ನಗರದಲ್ಲಿ ಅಭ್ಯರ್ಥಿಯನ್ನಾಗಿ ಹೆಸರಿಸಲಾಯಿತು ಎಂದು ತಮಿಳು ಪಕ್ಷದ ಮೂಲಗಳು ತಿಳಿಸಿವೆ.
ಐಟಿಎಕೆಯ ಪ್ರಮುಖ ಸದಸ್ಯರಾದ ಎಂ.ಎ. ಸುಮಂತ್ರನ್ ಅವರು, ಕೆಲ ತಮಿಳು ಪಕ್ಷಗಳ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಇದು ದೇಶದಲ್ಲಿ ತಮಿಳು ಅಲ್ಪಸಂಖ್ಯಾತರ ಸ್ಥಾನವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇಲ್ಲಿವರೆಗೆ 22 ನಾಮಪತ್ರ: ನಾಮಪತ್ರ ಸಲ್ಲಿಸಲು ಇದೇ 15 ಕೊನೆಯ ದಿನವಾಗಿದ್ದು, ಇಲ್ಲಿಯವರೆಗೆ 22 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ರಾಜಪಕ್ಸೆ ಕುಟುಂಬದ 38 ವರ್ಷದ ನಮಲ್ ರಾಜಪಕ್ಸೆ ಅವರನ್ನು ಎಸ್‌ಎಲ್‌ಪಿಪಿ ತನ್ನ ಅಭ್ಯರ್ಥಿ ಎಂದು ಬುಧವಾರ ಹೆಸರಿಸಿದೆ.
ಅಧ್ಯಕ್ಷ ವಿಕ್ರಮಸಿಂಘೆ, ಪ್ರಮುಖ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ್, ಮಾರ್ಕ್ಸ್‌ವಾದಿ ಜೆವಿಪಿ ನಾಯಕ ಅನುರ ಕುಮಾರ ಡಿಸಾನಾಯಕೆ ಅವರು ಈಗಾಗಲೇ ಕಣದಲ್ಲಿದ್ದಾರೆ.
ಶ್ರೀಲಂಕಾದಲ್ಲಿ ಭಾರತೀಯ ಮೂಲದ ತಮಿಳರು ಮತ್ತು ಸ್ಥಳೀಯ ತಮಿಳರು ಇದ್ದಾರೆ. ಅವರು ಉತ್ತರ ಮತ್ತು ಪೂರ್ವ ಶ್ರೀಲಂಕಾದಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ.