ಕಾಸರಗೋಡು: ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ ಉತ್ತರ, ಕಾಸರಗೋಡು ಜಿಲ್ಲೆ, ಇದರ ತ್ರೈಮಾಸಿಕ ಸಮಾವೇಶ ಕಾಸರಗೋಡಿನ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಕಚೇರಿಯಲ್ಲಿ ಜರುಗಿತು. ಸಂಸ್ಥೆ ಜಿಲ್ಲಾಧ್ಯಕ್ಷ ಹಿರಣ್ಯ ಮಹಾಲಿಂಗ ಭಟ್ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದ ಅಂಗವಾಗಿ ಮಂದಿರದ ವಠಾರದಲ್ಲಿ "ಪ್ರೇಮತರು" ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸ್ವಾಮಿಯ ನಾಮಸ್ಮರಣೆ, ಸಾಮೂಹಿಕ ಸಾಯಿ ಗಾಯತ್ರಿ ಪಠಣದ ನಂತರ ಸಭಾ ಕಾರ್ಯಕ್ರಮ ನಡೆಯಿತು. ಜಿಲ್ಲೆಯ ಎಲ್ಲಾ ಸಮಿತಿಗಳ ಸಂಚಾಲಕರು ತಮ್ಮ ಸಮಿತಿಗಳಲ್ಲಿ ಜರಗಿದ ಕಾರ್ಯಕ್ರಮಗಳ ವರದಿಯನ್ನು ವಾಚಿಸಿದರು. ಸಂಸ್ಥೆಯ ಜಿಲ್ಲಾ ಪದಾಧಿಕಾರಿಗಳು ವಿವಿಧ ವಿಭಾಗಗಳ ವತಿಯಿಂದ ನಡೆಯುವ ಕಾರ್ಯಕ್ರಮಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಸಂಸ್ಥೆ ಜಿಲ್ಲಾಧ್ಯಕ್ಷ ಮಹಾಲಿಂಗ ಭಟ್, ಉಪಾಧ್ಯಕ್ಷ ರಾಮಚಂದ್ರ ಚೆರುಗೋಳಿ, ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಿ ರಾಷ್ಟ್ರ ಮತ್ತು ರಾಜ್ಯ ಸಂಸ್ಥೆಯಿಂದ ಕೈಗೊಳ್ಳುವ ಎಲ್ಲ ಕಾರ್ಯ ಚಟುವಟಿಕೆಗಳಲ್ಲಿಯೂ ಎಲ್ಲಾ ಸಮಿತಿಗಳು ಸಕ್ರಿಯವಾಗಿ ಪಾಲ್ಗೊಳ್ಳಲು ತೀರ್ಮಾನಿಸಲಾಯಿತು. ಮಹಾಮಂಗಳಾರತಿ, ನಾರಾಯಣ ಸೇವೆಯೊಂದಿಗೆ ಸಮಾರಂಭ ಸಂಪನ್ನಗೊಂಡಿತು.