HEALTH TIPS

ಹಸೀನಾ ಮುಂದಿನ ಪಯಣಕ್ಕೆ ತಡೆ; ಭಾರತದಲ್ಲೇ ಇನ್ನಷ್ಟು ದಿನ ನೆಲೆ

 ವದೆಹಲಿ: ತೀವ್ರ ಪ್ರತಿರೋಧದಿಂದಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಢಾಕಾ ತೊರೆದ ಬಾಂಗ್ಲಾದೇಶದ ಶೇಖ್ ಹಸೀನಾ ಅವರ ಮುಂದಿನ ಪ್ರಯಾಣಕ್ಕೆ ಅನಿರೀಕ್ಷಿತ ತಡೆಯುಂಟಾಗಿದೆ. ಹೀಗಾಗಿ ಮುಂದಿನ ಒಂದೆರೆಡು ದಿನ ಭಾರತದಲ್ಲೇ ಅವರು ತಂಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಸಂಜೆ ನವದೆಹಲಿ ಬಳಿಯ ಹಿಂಡನ್ ವಾಯುನೆಲೆಗೆ ಸೇನಾ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಹಸೀನಾ ಅವರನ್ನು ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದೆ. ಜತೆಗೆ ಭಿಗಿ ಭದ್ರತೆಯನ್ನೂ ಒದಗಿಸಲಾಗಿದೆ. ಭಾರತದಿಂದ ಲಂಡನ್‌ಗೆ ತೆರಳುವ ಯೋಜನೆಯನ್ನು ಅವರು ಹೊಂದಿದ್ದರು. ಆದರೆ ಹಸೀನಾ ಅವರು ಯಾವುದೇ ತನಿಖೆ ಎದುರಿಸುವ ಸನ್ನಿವೇಶ ಎದುರಾದರೆ, ಅದಕ್ಕೆ ಬ್ರಿಟನ್ ಸರ್ಕಾರ ಕಾನೂನಾತ್ಮಕ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ ನಂತರ, ತಮ್ಮ ಯೋಜನೆಯನ್ನು ಒಂದೆರಡು ದಿನಗಳ ಮಟ್ಟಿಗೆ ಅವರು ಮುಂದೂಡಿದ್ದಾರೆ.

ಲಂಡನ್‌ಗೆ ಹೋಗುವ ಯೋಜನೆಯನ್ನು ಭಾರತಕ್ಕೆ ತಿಳಿಸಿಯೇ ಅವಾಮಿ ಲೀಗ್‌ನ ನಾಯಕಿ ಹಸೀನಾ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದರು. ಆದರೆ ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮ್ಮಿ ಅವರು ಹೇಳಿಕೆಯೊಂದನ್ನು ನೀಡಿ, 'ಬಾಂಗ್ಲಾದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಹಿಂಸಾಚಾರಕ್ಕೆ ಹಲವು ಮುಗ್ಧ ಜೀವುಗಳು ಬಲಿಯಾಗಿವೆ. ಈ ಕುರಿತು ವಿಶ್ವಸಂಸ್ಥೆ ನೇತೃತ್ವದಲ್ಲಿ ಸ್ವತಂತ್ರ ಮತ್ತು ಸವಿಸ್ತಾರವಾದ ತನಿಖೆ ನಡೆಯಬೇಕಾದ ಅನಿವಾರ್ಯತೆ ಇದೆ' ಎಂದಿದ್ದರು.

ಬ್ರಿಟನ್ ಸರ್ಕಾರದ ಈ ನಡೆಯಿಂದಾಗಿ ಮುಂದಿನ ದಾರಿ ಯಾವುದು ಎಂಬ ಗೊಂದಲದಲ್ಲಿ ಹಸೀನಾ ಇದ್ದಾರೆ. ಸ್ಪಷ್ಟತೆ ಇಲ್ಲದ ಕಾರಣ ಮುಂದಿನ ಒಂದೆರೆಡು ದಿನ ಭಾರತದಲ್ಲೇ ಆಶ್ರಯ ಪಡೆಯಲಿದ್ದಾರೆ ಎಂದು ಅವರ ಆಪ್ತ ವಲಯ ಹೇಳಿರುವುದಾಗಿ ವರದಿಯಾಗಿದೆ.



76 ವರ್ಷದ ಹಸೀನಾ ಅವರು ಕಳೆದ 15 ವರ್ಷಗಳಿಂದ ದಕ್ಷಿಣ ಏಷ್ಯಾದಲ್ಲೇ ಪ್ರಭಾವಿ ನಾಯಕಿ ಎಂದೆನಿಸಿಕೊಂಡಿದ್ದರು. ಆದರೆ ಉದ್ಯೋಗ ಮೀಸಲಾತಿ ವಿಷಯವಾಗಿ ಆರಂಭಗೊಂಡ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲೇ, ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

1971ರಲ್ಲಿ ನಡೆದ ಬಾಂಗ್ಲಾ ವಿಮೋಚನೆಯಲ್ಲಿ ಹೋರಾಡಿದ ಯೋಧರ ಕುಟುಂಬದವರಿಗೆ ನೀಡಲಾಗುತ್ತಿದ್ದ ಮೀಸಲಾತಿ ಪ್ರಮಾಣ ಶೇ 30ರಷ್ಟಿತ್ತು. ಇದನ್ನು ರದ್ದುಪಡಿಸುವಂತೆ ಹೋರಾಟ ಆರಂಭಗೊಂಡಿತು. ಕಳೆದ ಜನವರಿಯಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದರೂ, ವಿರೋಧ ಪಕ್ಷಗಳು ಇದನ್ನು ಬಹಿಷ್ಕರಿಸಿದ್ದವು. ಹೀಗಾಗಿ ಸತತ 4ನೇ ಬಾರಿಗೆ ಅವರು ಪ್ರಧಾನಿಯಾದರು.

ಶೇಖ್ ಹಸೀನಾ ಹಾಗೂ ಅವರ ಸೋದರಿ ಶೇಖ್ ರಹಾನಾ ಅವರು ಪ್ರಧಾನಿಯ ಅಧಿಕೃತ ನಿವಾಸ ಗಣ ಭವನವನ್ನು ತೊರೆದು, ಸೇನಾ ಹೆಲಿಕಾಪ್ಟರ್ ಮೂಲಕ ಹಿಂಡನ್ ವಾಯುನೆಲೆಗೆ ಸೋಮವಾರ ಬಂದಿಳಿದಿದ್ದರು.

ರೆಹಾನಾ ಅವರ ಮಗಳು ಟ್ಯುಲಿಪ್ ಸಿದ್ದಿಕ್ ಅವರು ಬ್ರಿಟನ್‌ನಲ್ಲಿ ಸಂಸದೆಯಾಗಿದ್ದಾರೆ. ಲಂಡನ್‌ನಲ್ಲಿ ಸೋಮವಾರ ಹೇಳಿಕೊಂದನ್ನು ನೀಡಿದ್ದ ಬ್ರಿಟನ್‌ ವಿದೇಶಾಂಗ ಸಚಿವ ಡೇವಿಡ್ ಲ್ಯಾಮ್ಮಿ, 'ಬಾಂಗ್ಲಾದೇಶದಲ್ಲಿ ಹಿಂದೆಂದೂ ಕಾಣದಂತಹ ಹಿಂಸಾಚಾರ, ಜೀವಹಾನಿ ಆಗಿದೆ, ಘಟನೆಗಳ ಬಗ್ಗೆ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಸ್ವತಂತ್ರವಾದ ತನಿಖೆಯೊಂದು ಆಗಬೇಕು' ಎಂದು ಹೇಳಿದ್ದಾರೆ.

ಹಸೀನಾ ಅವರು ತಮ್ಮ ಮುಂದಿನ ನಡೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ ಎಂದು ಗೊತ್ತಾಗಿದೆ. ಹಸೀನಾ ಅವರ ಕುಟುಂಬದ ಕೆಲವು ಸದಸ್ಯರು ಫಿನ್ಲೆಂಡ್‌ನಲ್ಲಿ ಇರುವ ಕಾರಣಕ್ಕೆ, ಅವರು ಫಿನ್ಲೆಂಡಿಗೆ ತೆರಳುವ ಆಲೋಚನೆಯಲ್ಲಿಯೂ ಇದ್ದಾರೆ.

ಪರಿಸ್ಥಿತಿಯು ಬದಲಾಗುತ್ತಲೇ ಇರುವ ಕಾರಣ, ಮುಂದಿನ ನಡೆಯು ಇನ್ನೂ ಸ್ಪಷ್ಟವಾಗಿಲ್ಲ ಎಂದು ಮೂಲಗಳು ವಿವರಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries