ತಿರುವನಂತಪುರ: ಪಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿದ ಎಚ್ಚರಿಕೆಯನ್ನು ಕೇರಳ ಸರ್ಕಾರ ಪರಿಗಣಿಸಿರಲಿಲ್ಲ ಎಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿಕೆ 'ಆಧಾರರಹಿತ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯನ್, 'ಭೂಕುಸಿತಕ್ಕೂ ಮುನ್ನ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿತ್ತು.
'ಜುಲೈ 29ರಂದು ಆರೆಂಜ್ ಅಲರ್ಟ್ ಘೋಷಿಸಿದ್ದ ಐಎಂಡಿ, ಜಿಲ್ಲೆಯಲ್ಲಿ 115ರಿಂದ 204 ಮಿ. ಮೀ. ಮಳೆ ಸುರಿಯಬಹುದು ಎಂದು ಎಚ್ಚರಿಸಿತ್ತು. ಆದರೆ ವಾಸ್ತವದಲ್ಲಿ ಐಎಂಡಿ ಲೆಕ್ಕ ತಪ್ಪಾಗಿದೆ. ಮೊದಲ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 200 ಮಿ.ಮೀ ಮಳೆ ಸುರಿದರೆ, ಮುಂದಿನ 24 ಗಂಟೆಯಲ್ಲಿ 372 ಮಿ.ಮೀ ಮಳೆ ಸುರಿದಿದೆ. 48 ಗಂಟೆಗಳಲ್ಲಿ ಜಿಲ್ಲೆಯಲ್ಲಿ 572 ಮಿ.ಮೀ ಮಳೆಯಾಗಿರುವುದು ದಾಖಲಾಗಿದೆ' ಎಂದು ಹೇಳಿದರು.
'ದುರಂತಕ್ಕೂ ಮುನ್ನ ಈ ಪ್ರದೇಶಕ್ಕೆ ರೆಡ್ ಅಲರ್ಟ್ ಘೋಷಿಸಿರಲಿಲ್ಲ. ಮಂಗಳವಾರ(ಜು.30) ಮುಂಜಾನೆ 6 ಗಂಟೆಯ ಬಳಿಕ ರೆಡ್ ಅಲರ್ಟ್ ಘೋಷಿಸಲಾಯಿತು. ಇದಲ್ಲದೆ ಜುಲೈ 23ರಿಂದ ಜುಲೈ 28ರವರೆಗೆ ಈ ಪ್ರದೇಶಕ್ಕೆ ಆರೆಂಜ್ ಅಲರ್ಟ್ ಅನ್ನೂ ನೀಡಿರಲಿಲ್ಲ' ಎಂದರು.
'ಜುಲೈ 30ರಂದು ಐಎಂಡಿಯು 'ಲ್ಯಾಂಡ್‌ಸ್ಲೈಡ್ ವಾರ್ನಿಂಗ್ ಸಿಸ್ಟಮ್' ಅನ್ನು ವಯನಾಡಿನಲ್ಲಿ ಸ್ಥಾಪಿಸಿತ್ತು. ಸಣ್ಣ ಭೂಕುಸಿತ ಸಾಧ್ಯತೆಯ ಬಗ್ಗೆ ಎಚ್ಚರಿಸಿ ಜುಲೈ 30 ಮತ್ತು 31ಕ್ಕೆ ಗ್ರೀನ್ ಅಲರ್ಟ್ ಅನ್ನೂ ಘೋಷಿಸಿತ್ತು. ಆದರೆ ಜಿಲ್ಲೆಯಲ್ಲಿ ಊಹಿಸಿದಕ್ಕಿಂತಲೂ ಹೆಚ್ಚು ಮಳೆಯಾಗಿದ್ದು, ಭೂಕುಸಿತ ಸಂಭವಿಸಿದೆ' ಎಂದು ಹೇಳಿದರು.
'ಪ್ರವಾಹ ಮುನ್ನೆಚ್ಚರಿಕೆ ನೀಡುವ ಜವಾಬ್ದಾರಿ ಹೊಂದಿರುವ ಕೇಂದ್ರ ನೀರಾವರಿ ಆಯೋಗ, ಈ ಪ್ರದೇಶದಲ್ಲಿ ಹರಿಯುವ ಇರುವಜಿಂಜಿ ಪೂಳ ಮತ್ತು ಚಾಲಿಯಾರ್ ನದಿ ತೀರದ ಪ್ರದೇಶಕ್ಕೆ ಪ್ರವಾಹ ಎಚ್ಚರಿಕೆಯನ್ನೂ ನೀಡಿರಲಿಲ್ಲ' ಎಂದು ಹೇಳಿದರು.
'ಈ ವಿಚಾರದಲ್ಲಿ ನಾನು ಯಾರನ್ನು ದೂಷಿಸಲು ಹೋಗುವುದಿಲ್ಲ. ಇದು ಒಬ್ಬರೊನ್ನೊಬ್ಬರು ದೂಷಿಸಿಕೊಳ್ಳುವ ಆಟವಲ್ಲ. ಹವಾಮಾನ ಬದಲಾವಣೆಯು ನಮ್ಮ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಅಗತ್ಯವಿದೆ' ಎಂದರು.