HEALTH TIPS

ರಾಜಸ್ಥಾನದಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ



 ಜೈಪುರ: ರಾಜಸ್ಥಾನದ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ ದಾಖಲೆ ಪ್ರಮಾಣ ಮಳೆಯಾಗಿದೆ. ಇಲ್ಲಿನ ಟೋಂಕ್‌ ಜಿಲ್ಲೆಯ ನಾಗರ್‌ಪೋರ್ಟ್‌ನಲ್ಲಿ 32.1 ಸೆಂ.ಮೀ, ಧುನಿ ಎಂಬಲ್ಲಿ 21.9 ಸೆಂ.ಮೀ., ಪಾಲಿ ಜಿಲ್ಲೆಯ ಸೋಜತ್‌ನಲ್ಲಿ 26.1 ಸೆಂ.ಮೀ, ಬೂಂಧಿ ಜಿಲ್ಲೆಯ ಹಿಂಡೋಲಿಯಲ್ಲಿ 21.7 ಸೆಂ.ಮೀ, ಭಿಲಾವಾಡ ಜಿಲ್ಲೆಯ ಜಹಜ್‌ಪುರ್‌ನಲ್ಲಿ 21.3 ಸೆಂ.ಮೀ.

ಮಳೆ ಸುರಿದಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ಬರ್ಮೆರ್‌ ಜಿಲ್ಲೆಯ ಕಲ್ಯಾಣದಲ್ಲಿ 19 ಸೆಂ.ಮೀ, ಜಲ್ವಾರ್‌ ಜಿಲ್ಲೆಯ ಬಕಾನಿಯಲ್ಲಿ 13.3 ಸೆಂ.ಮೀ, ಬರಾನ್‌ ಜಿಲ್ಲೆಯ ಕಿಶನ್‌ಗಂಜ್‌ನಲ್ಲಿ 15.8 ಸೆಂ.ಮೀ, ಅಜ್ಮೇರ್‌ ಜಿಲ್ಲೆಯ ಸಾರವಾಡ, ಕೆಕ್ರಿ, ಗೆವಾಲ್‌ ಹಾಗೂ ಮಂಗಲಿಯಾವಾಸ್‌ನಲ್ಲಿ ಕ್ರಮವಾಗಿ 18.1. 18, 16.6 ಹಾಗೂ 15.5 ಸೆಂ.ಮೀನಷ್ಟು ಮಳೆ ಸುರಿದಿದೆ ಎಂದು ತಿಳಿಸಿದೆ.

ಮಧ್ಯಪ್ರದೇಶದಲ್ಲಿ ರೂಪುಗೊಂಡಿದ್ದ ವಾಯುಭಾರ ಕುಸಿತವು ಸೋಮವಾರ ಪೂರ್ವ ರಾಜಸ್ಥಾನವನ್ನು ತಲುಪಿ ದುರ್ಬಲಗೊಂಡಿತು. ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ ರಾಜಸ್ಥಾನದತ್ತ ತಲುಪಲಿದೆ.

ಮಳೆಯ ಆರ್ಭಟ ಮುಂದುವರಿದಿದ್ದು, ಅಜ್ಮೇರ್‌, ಪಾಲಿ, ರಾಜಸಮಂದ್‌, ಜಲೋರ್‌, ಶಿರೋಹಿ, ಆಗೌರ್‌, ಜೋಧಪುರ, ಜೈಸಲ್ಮೇರ್‌, ಬರ್ಮೆರ್‌ನಲ್ಲಿ ಗರಿಷ್ಠ 20 ಸೆಂ.ಮೀ. ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭರತ್‌ಪುರ, ಜೈಪುರ್‌, ಕೋಟಾ ಹಾಗೂ ಬಿಕಾನೇರ್‌ನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.

'ಜೋಧಪುರ ವಿಭಾಗದ ಕೇರಳ- ಪಾಲಿ ಯಾರ್ಡ್‌ ಭಾರಿ ಮಳೆಯಿಂದಾಗಿ ಜಲಾವೃತಗೊಂಡಿದ್ದು, ರೈಲ್ವೆ ಸಂಚಾರಕ್ಕೂ ತೊಂದರೆ ಉಂಟಾಯಿತು. ಹೀಗಾಗಿ, ಜೋಧಪುರ- ಸಾಬರಮತಿ, ಸಾಬರಮತಿ-ಜೋಧಪುರ ಎಕ್ಸ್‌ಪ‍್ರೆಸ್‌ ರೈಲುಗಳನ್ನು ಆ.5ರಂದು ರದ್ದುಗೊಳಿಸಲಾಯಿತು' ಎಂದು ವಾಯವ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಶಿಕಿರಣ್‌ ತಿಳಿಸಿದರು.

'ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದು, ಕೆಲವು ರೈಲುಗಳ ಸಂಚಾರವನ್ನು ಬೇರೆ ಮಾರ್ಗದ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು' ಎಂದರು.

ಅಜ್ಮೇರ್‌, ಜೋಧಪುರ, ಬಿಕಾನೇರ್‌ ವಿಭಾಗಗಳಲ್ಲಿ ಆಗಸ್ಟ್‌ 6ರಂದು ಮಳೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

130 ಯಾತ್ರಾರ್ಥಿಗಳ ರಕ್ಷಣೆ;

ರುದ್ರಪ್ರಯಾಗ್‌, ಉತ್ತರಾಖಂಡ (ಪಿಟಿಐ): ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಸಿಲುಕಿದ್ದ 130 ಯಾತ್ರಾರ್ಥಿಗಳನ್ನು ಹೆಲಿಕಾಪ್ಟರ್‌ ಮೂಲಕ ಸೋಮವಾರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

ಕೇದಾರ್‌ ಕಣಿವೆಯಲ್ಲಿ ಹವಾಮಾನ ತಿಳಿಯಾಗುತ್ತಿದ್ದಂತೆಯೇ, ವಾಯುಸೇನೆಯ ಚಿನೂಕ್‌, ಎಂಐ-17 ಹೆಲಿಕಾಪ್ಟರ್‌ ಬಳಸಿಕೊಂಡು ಯಾತ್ರಾರ್ಥಿಗಳನ್ನು ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ಕೇದಾರನಾಥ, ಲಿಂಚೋಲಿ, ಭಿಂಬಾಲಿ, ಗೌರಿಕುಂಡ್‌ನಲ್ಲಿ ಸಿಲುಕಿದ್ದ 10,374 ಮಂದಿಯನ್ನು ಇದುವರೆಗೆ ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ಪುನರ್ವಸತಿ ಹಾಗೂ ವಿಪತ್ತು ನಿರ್ವಹಣಾ ವಿಭಾಗದ ಕಾರ್ಯದರ್ಶಿ ವಿನೋದ್‌ ಕುಮಾರ್ ಸುಮನ್‌ ತಿಳಿಸಿದರು.

ಬಂಗಾಳದಲ್ಲಿ ಪ್ರವಾಹ ಭೀತಿ;

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿವಿಧ ಜಿಲ್ಲೆಗಳಲ್ಲಿ ಆಗಸ್ಟ್‌ 9ರವರೆಗೂ ಭಾರಿ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಸೋಮವಾರ ಎಚ್ಚರಿಕೆ ನೀಡಿದೆ.

ಡಾರ್ಜಿಲಿಂಗ್‌, ಕಾಲಿಮ್‌ಪೊಂಗ್‌, ಜಲಪಾಯಿಗುರಿ, ಅಲಿಪುರ್‌ದೌರ್‌ ಹಾಗೂ ಕೂಚ್‌ಬೆಹಾರ್‌ ಜಿಲ್ಲೆಗಳಲ್ಲಿ ಗರಿಷ್ಠ ಮಳೆಯಾಗಲಿದೆ. ಜಲಪಾಯಿಗುರಿಯಲ್ಲಿ ಭಾನುವಾರದಿಂದ ಸೋಮವಾರದ ಅವಧಿಯಲ್ಲಿ 6 ಸೆಂ.ಮೀ ಮಳೆಯಾಗಿದೆ.

ಹಿಮಾಚಲದಲ್ಲಿ ಮುಚ್ಚಿದ 87 ರಸ್ತೆಗಳು

ಶಿಮ್ಲಾ: ಭಾರಿ ಮಳೆಯಿಂದ ಹಲವೆಡೆ ಭೂಕುಸಿತ ಸಂಭವಿಸಿದ್ದು ರಾಜ್ಯದ ವಿವಿಧೆಡೆ 87 ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣಾ ತಂಡ ಕೇಂದ್ರವು ಸೋಮವಾರ ತಿಳಿಸಿದೆ. ಗುರುವಾರದವರೆಗೂ ರಾಜ್ಯದ ಹಲವೆಡೆ ಹವಾಮಾನ ಇಲಾಖೆಯು 'ಯಲ್ಲೋ ಅಲರ್ಟ್' ಘೋಷಿಸಿದೆ. ಕಳೆದೊಂದು ವಾರದಿಂದ ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದ್ದು ಮೇಘಸ್ಫೋಟದಿಂದ ದಿಢೀರ್ ಪ್ರವಾಹದಿಂದ ಕುಲ್ಲು ಜಿಲ್ಲೆಯಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಮಂಡಿ ಶಿಮ್ಲಾ 40ಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ.

ಗುಜರಾತ್‌: 1 ಸಾವಿರ ಮಂದಿ ಸ್ಥಳಾಂತರ

ಅಹಮದಾಬಾದ್‌: ದಕ್ಷಿಣ ಗುಜರಾತ್‌ನ ನವಸಾರಿ ವಲಸಾಡ್‌ನಲ್ಲಿ ಭಾರಿ ಮಳೆಯಾಗಿದ್ದು ತಗ್ಗು ಪ್ರದೇಶದಲ್ಲಿ ವಾಸಿಸುತ್ತಿದ್ದ ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ಸೋಮವಾರ ಸ್ಥಳಾಂತರಿಸಲಾಗಿದೆ. ನವಸಾರಿಯ ಕೆರ್‌ಗಾಮ್‌ ತಾಲ್ಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ 22 ಸೆಂ.ಮೀ. ಮಳೆಯಾಗಿದೆ. ತಾಪಿ ಡಾಂಗ್‌ ಜಿಲ್ಲೆಯ 12 ತಾಲ್ಲೂಕುಗಳಲ್ಲಿ 10 ಸೆಂ.ಮೀಗೂ ಅಧಿಕ ಮಳೆಯಾಗಿದೆ ಎಂದು ರಾಜ್ಯ ತುರ್ತು ನಿರ್ವಹಣಾ ಕೇಂದ್ರ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries