ಪೆರ್ಲ: ಕೇರಳ ರಾಜ್ಯ ಎಸ್ಸೆಸೆಲ್ಸಿ ಕನ್ನಡ ಮಾಧ್ಯಮ ಮಕ್ಕಳ ಕಲಿಕೆಗೆ ಸಹಾಯಕವಾಗಿ ಎಲ್ಲಾ ಪಾಠವನ್ನೊಳಗೊಂಡ ಚಾನೆಲ್ ಪರ ಬೋಧಕ ವಿಷಯದ "ಎಸ್ಸಸ್ಸೆಲ್ಸಿ ಎಕ್ಸಾಮ್ ವಿನ್ನರ್ ಕನ್ನಡ" ಚಾನೆಲ್ ಲೋಕಾರ್ಪಣೆಗೊಳಿಸಲಾಯಿತು.
ಟೀಮ್ ಕನ್ನಡ ಕಾಸರಗೋಡು ನೇತೃತ್ವದಲ್ಲಿ ತಯಾರಿಗೊಂಡ ಚಾನೆಲ್‍ನ್ನು ಪೆರ್ಲ ಸಮೀಪದ ಬೆದ್ರಂಪಳ್ಳದ ಪರಿಶ್ರಮ ಗಾರ್ಡನ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕ, ಸಂಶೋಧಕ, ಕಾಸರಗೋಡು ಸರ್ಕಾರಿ ಕಾಲೇಜು ಕನ್ನಡ ವಿಭಾಗ ಸಹ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು ಕಾಸರಗೋಡಿನಲ್ಲಿ ಕನ್ನಡದ ಉಳಿವಿಗಾಗಿ ಮಾಡುವ ಕಿಂಚಿತ್ ಕಾರ್ಯವೂ ಕೂಡ ಕನ್ನಡಿಗರ ಮನದಲ್ಲಿ ಆತ್ಮಸ್ಥೈರ್ಯ ಮೂಡಿಸುತ್ತಿದೆ. ಕನ್ನಡಕ್ಕಾಗಿ ಮಿಡಿಯುವ ಇಂತಹ ಜನರೊಂದಿಗೆ ಇಲ್ಲಿನ ಕನ್ನಡಪರ ಸಂಘಟನೆಗಳು, ಮುಂದಾಳುಗಳು, ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಗಳು ಪೆÇ್ರೀತ್ಸಾಹಿಸಿ ಬೆಂಬಲ ನೀಡಬೇಕಾಗಿದೆ. ಹಾಗಾದರೆ ಮಾತ್ರ ಮುಂದಿನ ಭವಿಷ್ಯಕ್ಕೆ ಇಲ್ಲಿನ ಕನ್ನಡದ ಕಂಪು ಹಸ್ತಾಂತರಿಸಲು ಸಾಧ್ಯ ಎಂದು ತಿಳಿಸಿದರು. ಚಾನೆಲ್‍ನ ಕಾರ್ಯ ಚಟುವಟಿಕೆಯ ಬಗ್ಗೆ ಚಂದ್ರಕಲಾ ನಿರಾಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಟೀಮ್ ಕನ್ನಡ ಕಾಸರಗೋಡಿನ ಬೇಬಿ ಜಯರಾಮ್, ಉದಯ ಕುಮಾರ್ ಎಂ, ವನಜಾಕ್ಷಿ ಚಂಬ್ರಕಾನ ಮೊದಲಾದವರು ಉಪಸ್ಥಿತರಿದ್ದರು. ಬಾಲಕೃಷ್ಣ ಬೇರಿಕೆ ಸ್ವಾಗತಿಸಿದರು. ಕವಯತ್ರಿ ದಿವ್ಯಾ ಗಟ್ಟಿ ಪರಕ್ಕಿಲ ನಿರೂಪಿಸಿದರು. ಸುಂದರ ಬಾರಡ್ಕ ವಂದಿಸಿದರು.