ತಿರುವನಂತಪುರಂ: ಮಲಯಾಳ ನಟ ಜಯಸೂರ್ಯ ವಿರುದ್ಧ ಮತ್ತೊಂದು ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಯುವಕನಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಅಡಿಯಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ರಂಜಿತ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗುವ ನಿರೀಕ್ಷೆಯಿದೆ.
ಈ ಬೆಳವಣಿಗೆಯ ಮಧ್ಯೆಯೇ, ಮಲಯಾಳ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಕುರಿತಂತೆ ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯನ್ನು ಸಲ್ಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗವು ಕೇರಳ ಸರ್ಕಾರಕ್ಕೆ ಸೂಚನೆ ನೀಡಿದೆ.
ಎರಡನೇ ಎಫ್‌ಐಆರ್:
ಜಯಸೂರ್ಯ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಟಿಯೊಬ್ಬರು ಆ.28ರಂದು ದೂರು ನೀಡಿದ ಬೆನ್ನಲ್ಲೇ, ಕೇರಳ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಲೈಂಗಿಕ ಕಿರುಕುಳ (ಐಪಿಸಿ 354) ನೀಡಿದ ಆರೋಪದ ಮೇಲೆ ಜಯಸೂರ್ಯ ವಿರುದ್ಧ ಗುರುವಾರ ಕರಮಾನಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
2012-2013ರಲ್ಲಿ ತೊಡುಪುಳದ ಸಮೀಪ ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ವೇಳೆ ನಟ ಜಯಸೂರ್ಯ ಅವರು ಲೈಂಗಿಕ ಕಿರುಕುಳ ನೀಡಿದರು ಎಂದು ಮಹಿಳೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿಂದೆ ದಾಖಲಾದ ಪ್ರಕರಣದಂತೆ ಅದೇ ಸೆಕ್ಷನ್‌ಗಳಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿರುವನಂತಪುರದ ಕಂಟೋನ್ಮೆಂಟ್ ಠಾಣೆ ಪೊಲೀಸರು ಖಚಿತಪಡಿಸಿದ್ದಾರೆ.
ರಂಜಿತ್ ವಿರುದ್ಧವೂ ದೂರು: ನಟನೆಗೆ ಅವಕಾಶ ಕೋರಿ 2012ರಲ್ಲಿ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಭೇಟಿಯಾದ ವೇಳೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕೋಯಿಕ್ಕೋಡ್‌ನ 33 ವರ್ಷದ ವ್ಯಕ್ತಿಯೊಬ್ಬರು ನಿರ್ಮಾಪಕ ರಂಜಿತ್ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ವ್ಯಕ್ತಿಯ ಹೇಳಿಕೆ ದಾಖಲಿಸಿಕೊಂಡಿದ್ದು, ತನಿಖೆಯನ್ನು ಬೆಂಗಳೂರು ಪೊಲೀಸರಿಗೆ ವರ್ಗಾಯಿಸುವ ನಿರೀಕ್ಷೆಯಿದೆ.
ಮತ್ತೊಂದೆಡೆ, ನಟ ಮುಕೇಶ್ ಸೇರಿದಂತೆ ಏಳು ಮಂದಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ನಟರು ಶುಕ್ರವಾರ ಕೊಚ್ಚಿಯ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಿದ್ದಾರೆ.
ಮುಂದುವರಿದ ಪ್ರತಿಭಟನೆ: ಮುಕೇಶ್
ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಶುಕ್ರವಾರ ಕೇರಳದಾದ್ಯಂತ ಪ್ರತಿಭಟನೆಗಳು ಮುಂದುವರಿದವು. ರಾಜೀನಾಮೆ ನೀಡದಿದ್ದರೆ ಸಿಪಿಎಂ ರಾಜ್ಯ ಮುಖ್ಯ ಕಚೇರಿಯಾದ ಎಕೆಜಿ ಭವನದ ಮುಂದೆ ಧರಣಿ ನಡೆಸಲಾಗುವುದು ಎಂದು ಮಹಿಳಾ ಹೋರಾಟಗಾರ್ತಿಯರು ಎಚ್ಚರಿಕೆ ನೀಡಿದ್ದಾರೆ.
ಮುಜುಗರ: ಲೈಂಗಿಕ ದೌರ್ಜನ್ಯದ ಆರೋಪಿ ನಟ ಎಂ.ಮುಕೇಶ್ ಅವರು ಶಾಸಕರಾಗಿ ಮುಂದುವರಿಯುತ್ತಿರುವ ಕುರಿತಂತೆ ಸಿಪಿಎಂ ಪಕ್ಷದ ಒಳಗೆ ಭಿನ್ನಾಭಿಪ್ರಾಯ ಮೂಡಿದೆ. ಪಕ್ಷದ ನಾಯಕಿ ಬೃಂದಾ ಕಾರಟ್ ಮುಕೇಶ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು ಕೆಲವು ಮುಖಂಡರು ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ.