ತಿರುವನಂತಪುರ: ಕೇರಳದ ಮುಲ್ಲಪೆರಿಯಾರ್ ಬಳಿ ಇರುವ 130 ವರ್ಷ ಹಳೆಯ ಅಣೆಕಟ್ಟೆಯ ಬಳಕೆಯನ್ನು ನಿಲ್ಲಿಸಿ, ಹೊಸದಾಗಿ ಅಣೆಕಟ್ಟೆಯನ್ನು ನಿರ್ಮಿಸಬೇಕು ಎಂಬ ಬೇಡಿಕೆ, ದುರಂತದ ಹಿನ್ನೆಲೆಯಲ್ಲಿ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.
ತಿರುವನಂತಪುರ: ಕೇರಳದ ಮುಲ್ಲಪೆರಿಯಾರ್ ಬಳಿ ಇರುವ 130 ವರ್ಷ ಹಳೆಯ ಅಣೆಕಟ್ಟೆಯ ಬಳಕೆಯನ್ನು ನಿಲ್ಲಿಸಿ, ಹೊಸದಾಗಿ ಅಣೆಕಟ್ಟೆಯನ್ನು ನಿರ್ಮಿಸಬೇಕು ಎಂಬ ಬೇಡಿಕೆ, ದುರಂತದ ಹಿನ್ನೆಲೆಯಲ್ಲಿ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.
ಎಲ್‌ಡಿಎಫ್ ಹಾಗೂ ಯುಡಿಎಫ್ ಪಕ್ಷಗಳ ಸಂಸದರು ಈ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ.
ವಯನಾಡ್ ದುರಂತದ ಬಳಿಕ ಮತ್ತೊಂದು ದುರಂತವನ್ನು ತಡೆದುಕೊಳ್ಳುವ ಶಕ್ತಿ ರಾಜ್ಯಕ್ಕಿಲ್ಲ ಎನ್ನುವುದನ್ನು ಸಚಿವರಿಗೆ ಈ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ.
ಸುರ್ಖಿ (ಮರಳಿನ ಬದಲಿಗೆ ಬಳಸುವ ವಸ್ತು) ಮತ್ತು ಸುಣ್ಣದ ಕಲ್ಲಿನ ಮಿಶ್ರಣದಿಂದ 1887-1895ರಲ್ಲಿ ಅಣೆಕಟ್ಟೆ ನಿರ್ಮಿಸಲಾಗಿದೆ. ಈ ಮಿಶ್ರಣವು ಕಾಂಕ್ರೀಟ್‌ನಷ್ಟು ಶಕ್ತಿಯುತವಾದುದಲ್ಲ. ಒಂದು ವೇಳೆ ಅಣೆಕಟ್ಟೆಗೆ ಹಾನಿಯಾದರೆ ರಾಜ್ಯದ ಇಡುಕ್ಕಿ, ಕೊಚ್ಚಿ, ಕೊಟ್ಟಾಯಂ, ಪತ್ತನಂತಿಟ್ಟ, ಆಲಪ್ಪುಳ ಜಿಲ್ಲೆಗಳ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ಹೊಸ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ವಿರೋಧ
'ಮುಲ್ಲಪ್ಪೆರಿಯಾರ್ ಅಣೆಕಟ್ಟು ಹಾನಿಗೊಳಗಾಗಿದ್ದು ಇದನ್ನು ಬಲಪಡಿಸುವ ಅಗತ್ಯ ಇದೆ' ಎಂದು ಕೇಂದ್ರ ಜಲ ಆಯೋಗವು 1979ರಲ್ಲಿ ಹೇಳಿತ್ತು. ಈ ಬಳಿಕ ಇದನ್ನು ಬಲಪಡಿಸುವ ಕಾರ್ಯವೂ ನಡೆದಿತ್ತು. 'ಅಣೆಕಟ್ಟೆಯನ್ನು ಬಲಗೊಳಿಸಲಾಗಿದೆ. ಹಾಗಾಗಿ ಹೊಸ ಅಣೆಕಟ್ಟೆ ನಿರ್ಮಾಣದ ಅಗತ್ಯ ಇಲ್ಲ' ಎಂದು ತಮಿಳುನಾಡು ವಾದಿಸುತ್ತಿದೆ. ಕೇರಳದಲ್ಲಿ ಅಣೆಕಟ್ಟು ಇದೆಯಾದರೂ ತಮಿಳುನಾಡು ಸರ್ಕಾರವೇ ಇದನ್ನು ನಿರ್ವಹಿಸುತ್ತದೆ.