ಕಾಸರಗೋಡು: ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದಲ್ಲಿ ಸುದೀರ್ಘ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ವಿದ್ವಾಂಸ ಪ್ರೊ.ಪಿ.ಶ್ರೀಕೃಷ್ಣ ಭಟ್ ಅವರಿಗೆ ಅರ್ಥಪೂರ್ಣವಾದ ಅಭಿನಂದನೆಯನ್ನು ಸಲ್ಲಿಸಲು ಅಭಿನಂದನ ಸಮಿತಿಯನ್ನು ರಚಿಸಲಾಗಿದೆ. ಇತ್ತೀಚೆಗೆ ಕಾಸರಗೋಡಿನಲ್ಲಿ ನಡೆದ ಸಭೆಯಲ್ಲಿ ಅವರ ಶಿಷ್ಯವರ್ಗದವರು, ಅಭಿಮಾನಿಗಳು ಮತ್ತು ಬಂಧುಗಳು ಭಾಗವಹಿಸಿದ್ದರು.
ಅಭಿನಂದನ ಸಮಿತಿಯ ಗೌರವಾಧ್ಯಕ್ಷರಾಗಿ ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ. ಅವರನ್ನು ಆರಿಸಲಾಗಿದೆ. ಅಭಿನಂದನ ಸಮಿತಿಯ ಅಧ್ಯಕ್ಷರಾಗಿ ಪ್ರೊ.ಪಿ.ಎನ್.ಮೂಡಿತ್ತಾಯ, ಪ್ರಧಾನ ಕಾರ್ಯದರ್ಶಿಯಾಗಿ ರಾಧಾಕೃಷ್ಣ ಮಿಂಚಿಪದವು, ಕೋಶಾಧಿಕಾರಿಯಾಗಿ ಡಾ.ಶ್ರೀಧರ ಎನ್.ಏತಡ್ಕ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಡಾ.ಕೆ.ಸುಬ್ರಹ್ಮಣ್ಯ ಭಟ್, ಡಾ.ಕೆ.ಕಮಲಾಕ್ಷ, ಪ್ರೊ.ಪದ್ಮನಾಭ ಪೂಜಾರಿ, ಪ್ರೊ.ಬಿ.ಸದಾಶಿವ, ಪ್ರೊ.ರಾಮ ಭಟ್ ಸಿ.ಎಚ್, ಪ್ರೊ.ಎ.ಶ್ರೀನಾಥ, ಕಾಸರಗೋಡು ಚಿನ್ನಾ ಹಾಗೂ ಜೊತೆ ಕಾರ್ಯದರ್ಶಿಗಳಾಗಿ ಡಾ.ಮೋಹನ ಕುಂಟಾರು, ಡಾ.ಸುಂದರ ಕೇನಾಜೆ, ಚಂದ್ರಹಾಸ ಬೇಕೂರು, ಯತೀಶಕುಮಾರ ರೈ, ಮಹಮ್ಮದಾಲಿ.ಕೆ, ರಾಮಮೂರ್ತಿ ಬಿ., ಲಕ್ಷ್ಮಿ.ಕೆ ಅವರು ಆಯ್ಕೆಯಾಗಿದ್ದಾರೆ.
ವ್ಯಾಕರಣ, ಭಾಷಾ ವಿಜ್ಞಾನ, ಹಳಗನ್ನಡ ಮತ್ತು ನಡುಗನ್ನಡ ಸಾಹಿತ್ಯದಲ್ಲಿ ಆಳವಾದ ಅಧ್ಯಯನವನ್ನು ನಡೆಸಿ ವಿದ್ವತ್ತನ್ನು ಪಡೆದ ಪ್ರೊ.ಪಿ.ಶ್ರೀಕೃಷ್ಣ ಭಟ್ಟರು ಕರ್ನಾಟಕ ಮಟ್ಟದ ಪಂಡಿತ ಪರಂಪರೆಯ ಬಹುಮುಖ್ಯ ಕೊಂಡಿ. ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ 28 ವರ್ಷಗಳ ಕಾಲ ಸುದೀರ್ಘ ಅಧ್ಯಾಪನವನ್ನು ನಡೆಸಿದ ಅವರ ಶಿಷ್ಯ ವರ್ಗದವರು ಸಮಾಜದ ನಾನಾ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. 1982ರಿಂದ 1998ರ ವರೆಗೆ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥರಾಗಿದ್ದರು. 1998ರಿಂದ ಹತ್ತು ವರ್ಷಗಳ ಕಾಲ ಕಣ್ಣೂರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಅಧ್ಯಯನಾಂಗದ ಮುಖ್ಯಸ್ಥರಾಗಿದ್ದರು. ಕೇರಳ ಮತ್ತು ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿಗಳ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಯುಜಿಸಿ, ಕೇರಳ ಲೋಕ ಸೇವಾ ಆಯೋಗ, ಕೇರಳ ಪರೀಕ್ಷಾ ಭವನ, ಕೇರಳ ಪಠ್ಯಪುಸ್ತಕ ರಚನಾ ಸಮಿತಿ ಮತ್ತು ಹಲವಾರು ರಾಷ್ಟ್ರೀಯ ವಿಚಾರ ಸಂಕಿರಣಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ದುಡಿದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕಾಸರಗೋಡಿನಲ್ಲಿ ಪಿಎಚ್‍ಡಿ ಮತ್ತು ಎಂ.ಫಿಲ್ ಸಂಶೋಧನೆಯನ್ನು ಮಾಡಿದವರ ಸಂಖ್ಯೆ ಹಿರಿದು. ಶಾಸನಗಳು ಮತ್ತು ವೀರಗಲ್ಲುಗಳು, ಕನ್ನಡ ವ್ಯಾಕರಣ ಪರಂಪರೆಯ ಮೇಲೆ ಸಂಸ್ಕøತದ ಪ್ರಭಾವ, ಶಾಸ್ತ್ರ ಸಾಹಿತ್ಯ ವಿಹಾರ, ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು, ಅವಲೋಕನ, ಕಳ್ಳಿಗೆ ಮಹಾಬಲ ಭಂಡಾರಿ, ಪ್ರೊ.ಪಿ.ಸುಬ್ರಾಯ ಭಟ್ ಮೊದಲಾದುವು ಅವರ ಪ್ರಕಟಿತ ಕೃತಿಗಳು. ಪ್ರತಿಷ್ಠಿತವಾದ ಶಂಕರ ಸಾಹಿತ್ಯ ಪ್ರಶಸ್ತಿ, ಕೇಶವ ಪ್ರಶಸ್ತಿ, ಸಾಧಕ ಶಿಕ್ಷಕ ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದಾರೆ. ಹೀಗೆ ಅಧ್ಯಾಪನ, ಸಂಶೋಧನೆ, ಶಾಸ್ತ್ರ ಸಾಹಿತ್ಯ ವಿಮರ್ಶೆಗಳಲ್ಲಿ ಪ್ರಕಾಂಡ ಪಾಂಡಿತ್ಯವನ್ನು ಹೊಂದಿರುವ ಪ್ರೊ. ಶ್ರೀಕೃಷ್ಣ ಭಟ್ಟರಿಗೆ ಕಾಸರಗೋಡಿನಲ್ಲಿ ಒಂದು ದಿವಸದ ಅಭಿನಂದನ ಸಮಾರಂಭವನ್ನು ಏರ್ಪಡಿಸಿ, ಮೌಲಿಕವಾದ ಅಭಿನಂದನ ಗ್ರಂಥವನ್ನು ಸಮರ್ಪಿಸಿ ಗೌರವಿಸಲು ತೀರ್ಮಾನಿಸಲಾಗಿದೆ.
ಅಭಿನಂದನ ಗ್ರಂಥದ ಪ್ರಧಾನ ಸಂಪಾದಕರಾಗಿ ಡಾ. ಯು.ಮಹೇಶ್ವರಿ, ಆರ್ಥಿಕ ಸಮಿತಿ ಸಂಚಾಲಕರಾಗಿ ವಿಶಾಲಾಕ್ಷ ಪುತ್ರಕಳ, ಕಾರ್ಯಕ್ರಮ ಸಂಯೋಜನೆಯ ಸಂಚಾಲಕರಾಗಿ ಡಾ.ರಾಧಾಕೃಷ್ಣ ಬೆಳ್ಳೂರು ಅವರನ್ನು ಆರಿಸಲಾಗಿದೆ.